ಇತಿಹಾಸ ಲೇಖನ
ಲೇಖಕರು ತಮ್ಮ ಸಮಕಾಲೀನರ ಮತ್ತು ಭವಿಷ್ಯಕಾಲೀನರ ತಿಳಿವಳಿಕೆ ಮತ್ತು ಆತ್ಮೋನ್ನತಿಗಳಿಗಾಗಿ ಒಕ್ಕಣಿಸಿದ ಐತಿಹಾಸಿಕ ಘಟನೆಗಳ ಸಾಹಿತ್ಯಾತ್ಮಕ ರಚನೆ. ಇದು ಸಾಹಿತ್ಯ ಚರಿತ್ರೆಯಲ್ಲ; ಅಥವಾ ಸಾಮಾಜಿಕ, ರಾಜಕೀಯ, ನೈತಿಕ ಅಥವಾ ಸಾಂಸ್ಕøತಿಕ ಕೃತ್ಯಗಳ ಚರಿತ್ರೆಯೂ ಅಲ್ಲ; ಅವೆಲ್ಲವೂ ಇದರಲ್ಲಿ ಕೂಡಿವೆ ಎಂಬುದೇನೋ ನಿಜ. ಇದು ಇತಿಹಾಸದ ತತ್ತ್ವ; ಆಲೋಚನೆ ಹಾಗೂ ಘಟನೆ ಇವೆರಡರ ಮೊತ್ತ. ತತ್ತ್ವಶಾಸ್ತ್ರದಂತೆ ಇತಿಹಾಸಕ್ಕೂ ಆದಿಯಿಲ್ಲ. ಆದರೆ ಮಾನವನ ಇತಿಹಾಸ ಲೇಖನಕಾರ್ಯ ಗ್ರೀಕರ ಕಾಲದಿಂದ ಪ್ರಾರಂಭವಾಯಿತೆಂದು ಹೇಳಬಹುದು. ಅವರು ಇತಿಹಾಸದ ಮೂಲಪುರುಷರು; ಇತಿಹಾಸ ಲೇಖನವನ್ನು ಒಂದು ಪ್ರಜ್ಞಾಪೂರ್ವಕ ಕಲೆಯಾಗಿ ಮಾಡಿದವರು. ಅದು ಅಲ್ಲಿ ಕಾರ್ಯ ಮತ್ತು ವಾಗ್ಮಿತೆಗಳ ಇಮ್ಮಡಿ ಸ್ಫೂರ್ತಿಯಿಂದ ಅರಳಿತು. ಗ್ರೀಸಿನಲ್ಲಿ ಅಯೋನಿಯದ ವಿಮರ್ಶಾತ್ಮಕ ಮತ್ತು ವಿವೇಚನಾಯುಕ್ತ ಸತ್ಯದಿಂದ ಕೂಡಿದ ಸ್ಥಳೀಯ ಕಾವ್ಯದಿಂದ ಇತಿಹಾಸ ರೂಪಿತವಾಯಿತು. ಈ ನಿಟ್ಟಿನ ಪ್ರಥಮ ಬರಹಗಾರರನ್ನು ಲಗಾಗ್ರಫರ್ ಅಥವಾ ಗದ್ಯಾತ್ಮಕ ಚರಿತ್ರಲೇಖಕರೆಂದು ಕರೆಯಲಾಗುತ್ತಿತ್ತು. ನಗರಗಳ, ಜನಾಂಗಗಳ, ಕಾರ್ತೇಜಿಯನರ, ದೇವಾಲಯಗಳ ಉಗಮಗಳನ್ನು ಕುರಿತ ಸಾಂಪ್ರದಾಯಿಕ ನಂಬಿಕೆಗಳನ್ನೂ ಪುರಾಣಗಳನ್ನೂ ಅವರು ಸರಳ ಗದ್ಯದಲ್ಲಿ ನಿರೂಪಿಸಿದರು. ಕ್ರಮೇಣ ಸ್ಥಳೀಯ ಘಟನೆಗಳು ಪುರಾಣಗಳ ಮತ್ತು ದಂತಕಥೆಗಳ ಸ್ಧಾನದಲ್ಲಿ ಲೇಖನದ ಮುಖ್ಯವಸ್ತುಗಳಾದುವು. ಪಾತ್ರಗಳನ್ನೂ ವ್ಯಕ್ತಿತ್ವಗಳನ್ನೂ ಚಿತ್ರಿಸುವ ಕಾರ್ಯಶೀಘ್ರವಾಗಿ ಆರಂಭವಾಯಿತು. ಜನರ, ವಸ್ತುಗಳ ಚರಿತ್ರೆ; ಮಹಾರಾಷ್ಟ್ರಗಳ, ಚಿಕ್ಕ ನಗರಗಳ ಚರಿತ್ರೆ; ರಾಜಕೀಯ, ಸಾಹಿತ್ಯ ಮತ್ತು ಸೈನಿಕ ದಾಖಲೆಗಳು-ಇವೆಲ್ಲವನ್ನೂ ನಿರೂಪಿಸತೊಡಗಿದರು ಗ್ರೀಕರು ಏನನ್ನೂ ತೊರೆಯಲಿಲ್ಲ, ಅಲಕ್ಷಿಸಲಿಲ್ಲ, ವಿಷಯ ನಿರೂಪಣೆಯೆ ಅವರ ಮುಖ್ಯೋದ್ದೇಶ.

	ಇತಿಹಾಸದ ಪಿತಾಮಹ ಹೀರಡಟಸನಿಂದ ಮುಂದಕ್ಕೆ ಲಗಾಗ್ರಫರ್ ಮತ್ತು ಇತಿಹಾಸಕಾರರ ನಡುವಣ ವ್ಯತ್ಯಾಸ ಅಳಿಸಿಹೋಯಿತು. ಗ್ರೀಕರಿಗೂ ಪರ್ಷಿಯನ್ನರಿಗೂ ನಡುವೆ ನಡೆದ ಘರ್ಷಣೆಗಳೇ ಹೀರಡಟಸನ ಬರಹದ ವಸ್ತು. ಕಥೆಗಾರನಾಗಿ ಹೀರಡಟಸನನ್ನು ಇದುವರೆಗೂ ಯಾರೂ ಮೀರಿಸಿಲ್ಲ. ಪುರಾಣಯುಗಕ್ಕೆ ಬಹಳ ಹತ್ತಿರದವನಾಗಿದ್ದು ಅದರ ಸರಳತೆ ಸಹಜತೆಗಳನ್ನೂ ಕಾವ್ಯದ ಚೆಲುವನ್ನೂ ಆತ ಉಳಿಸಿಕೊಂಡಿದ್ದಾನೆ. ಹೀರಡಟಸ್ ಚರಿತ್ರೆಯ ಜನಕ ಮಾತ್ರವೇ ಅಲ್ಲ; ಗದ್ಯಲೇಖಕ. ಆತನೊಬ್ಬ ನೀತಿವಾದಿಯೂ ಆಗಿದ್ದ. ಚರಿತ್ರೆಯನ್ನು ನಿದರ್ಶನಗಳ ಮೂಲಕ ಬೋಧಿಸುವುದರಲ್ಲಿ ಆತನಿಗೆ ನಂಬಿಕೆ. ಹೀರಡಟಸ್ ಒಂಬತ್ತು ಪುಸ್ತಕಗಳನ್ನು ರಚಿಸಿದ. ಇವುಗಳಲ್ಲಿ ಒಂದೊಂದಕ್ಕೂ ಒಬ್ಬೊಬ್ಬ ಕಲಾಭಿಮಾನಿ ದೇವತೆಯ ಹೆಸರು. ಅವನ ಬರವಣಿಗೆಯಲ್ಲಿ ಒಂದು ಹೊಂದಾಣಿಕೆಯುಂಟು. ಇತಿಹಾಸ ಬರಹಗಾರರಲ್ಲೆಲ್ಲ ಅಮರತ್ವದ ಹತ್ತಿರ ಹತ್ತಿರ ಹೋದವನೆಂದರೆ ಹೀರಡಟಸ್.

	ಗ್ರೀಕ್ ಚರಿತ್ರೆಯಲ್ಲಿ ಮುಂದಿನ ಹಿರಿಯ ಹೆಸರು ಥ್ಯೂಸಿಡಿಡಿಸ್. ಈತನದು ಚಿಂತನಪರ ಚೇತನ. ಘಟನೆಗಳು ಹೇಗೆ ಸಂಭವಿಸಿದುವು. ಏಕೆ ಸಂಭವಿಸಿದುವು ಎಂಬುದನ್ನು ಮನಗಾಣುವುದರಲ್ಲಿ ಇವನ ಆಸಕ್ತಿ. ಹೀರಡಟಸ್ಸನ ಅನಂತರ 13 ವರ್ಷಗಳ ಮೇಲೆ ಈತ ಬಂದರೂ ಇವರಿಬ್ಬರ ಮನೋಧರ್ಮಗಳು ಬಹಳ ಭಿನ್ನ. ಥ್ಯೂಸಿಡಿಡಿಸ್ ಘಟನೆಗಳನ್ನು ನಿರೂಪಿಸುವಾಗ ಅವುಗಳ ಹಿಂದಿನ ಕಾರಣಗಳನ್ನರಿಯುವುದಕ್ಕೂ ಉದ್ದೇಶಗಳನ್ನು ಕಂಡುಹಿಡಿಯುವುದಕ್ಕೂ ಪ್ರಕ್ರಿಯೆಗಳನ್ನು ವಿವರಿಸುವುದಕ್ಕೂ ಅಷ್ಟೇ ಆಸಕ್ತಿಯನ್ನು ತೋರಿಸುತ್ತಿದ್ದ. ಈತನ ದೃಷ್ಟಿಯಲ್ಲಿ ಘಟನೆಗಳು ಬಿಡಿ ಬಿಡಿಯಲ್ಲ. ತರ್ಕಬದ್ಧವಾಗಿ ಶಾಶ್ವತವಾಗಿ ಪರಸ್ಪರ ಸಂಬಂಧವುಳ್ಳ ವಾಸ್ತವಾಂಶಗಳೆಂದು ಇವನ್ನು ಅಭ್ಯಾಸಮಾಡುವುದರಲ್ಲಿಯೇ ಇವನಿಗೆ ನಂಬಿಕೆ. ವಿಷಯಗಳ ಪ್ರತ್ಯಕ್ಷ ಮೂಲಗಳು ಪತ್ತೆಯಾಗದಾಗ ಈತ ಅನ್ಯಾಕ್ಸಗೊರಾಸ್ಸನ ಅನುಪಾತ ತರ್ಕಕ್ರಮವನ್ನನ್ವಯಿಸುತ್ತಿದ್ದ; ಘಟನೆಯ ಹಿಂದಿರಬಹುದಾದ ಕಾರಣಾನ್ವೇಷಣೆ ಮಾಡುತ್ತಿದ್ದ. ಒಟ್ಟಿನಲ್ಲಿ ಗ್ರೀಕ್ ವಿಮರ್ಶೆಯ ತತ್ತ್ವವನ್ನು ಚರಿತ್ರೆಗೆ ಅನ್ವಯಿಸಿದ. ಇದೇ ಅವನ ಹಿರಿಮೆ. ಅವಿಚಾರದ ನಂಬಿಕೆಗಳನ್ನಾಧರಿಸಿದ ಹೇಳಿಕೆಗಳನ್ನೆಲ್ಲ ತಳ್ಳಿ ಹಾಕಿದ. ಹದಿನೆಂಟನೆಯ ಶತಮಾನದ ವಿಚಾರಶೀಲನ ತೆರದಲ್ಲಿ ಆಗಿನ ದಿವ್ಯವಾಣಿಗಳಿಗೆ ಸಂದೇಹದ ಚಿಕಿತ್ಸೆ ಮಾಡಿದ. ಅವನ ನೀತಿಬೋಧೆ ಉನ್ನತವೂ ಮನಮುಟ್ಟುವಂಥದೂ ಆದದ್ದು. ರೋಮನ್ ಇತಿಹಾಸ ಲೇಖನದ ಉಪಯುಕ್ತತಾವಾದದಿಂದಲಾಗಲಿ. ಕ್ರೈಸ್ತ ಇತಿಹಾಸ ಲೇಖನದ ಆತ್ಮೋನ್ನತಿಕಾರಕ ಗುಣದಿಂದಲಾಗಲಿ ಬೇರೆಯಾದಂಥದು. ಯುದ್ಧ ತಮ್ಮಟೆ ಬಾರಿಸಿ ಕಹಳೆಯೂದುವುದೇ ಚರಿತ್ರೆಯ ಉದ್ದೇಶವೆಂಬ ವಾದವನ್ನು ಅವನು ಪ್ರತಿಪಾದಿಸಿದವನಲ್ಲ. ಯುದ್ಧತಂತ್ರವನ್ನು ಇತಿಹಾಸದ ಒಂದು ವೈಶಿಷ್ಟ್ಯವೆಂದು ಪರಿಗಣಿಸಿದ ಗ್ರೀಕ್ ಚರಿತ್ರಕಾರರಲ್ಲಿ ಇವನೇ ಮೊದಲಿಗ. ಇತಿಹಾಸದ ಆರ್ಥಿಕ ಅಂಶಗಳನ್ನು ಗಮನಕ್ಕೆ ತಂದುಕೊಂಡ ನೀತಿಜ್ಞನಾಗಿ ಇಡೀ ಪ್ರಪಂಚದ ಬರಹಗಾರರಲ್ಲಿ ಅತ್ಯಂತ ಶ್ರೇಷ್ಠರ ಪಂಕ್ತಿಗೆ ಸೇರದವನೀತ. ಜನಪ್ರಿಯ ಸರ್ಕಾರದಲ್ಲಿ ಈತನಿಗೆ ನಂಬಿಕೆ. ನಿರಂಕುಶ ಅಧಿಕಾರ ಹಾಗೂ ಸ್ವಲ್ಪ ಜನಾಧಿಪತ್ಯಗಳಲ್ಲಿ ದ್ವೇಷ. ಆದರೆ ಪ್ರಜಾಸತ್ತಾತ್ಮಕ ಸರ್ಕಾರದ ಸ್ವರೂಪ ದೌರ್ಬಲ್ಯಗಳ ಬಗ್ಗೆ ಇವನೆಂದೂ ಮೋಸಹೋಗಲಿಲ್ಲ. ಭಾವೋತ್ಕರ್ಷಭರಿತ ಉಕ್ತಿ ವೈಭವದಲ್ಲಿ ಪೆರಿಕ್ಲಿಸ್ ಮಾಡಿದ ಮೃತಸಮ್ಮುಖ ಭಾಷಣವನ್ನು ಮೀರಿಸುವಂಥದು ಬಲು ವಿರಳ. ಇಡೀ ಪೃಥ್ವಿಯೇ ಪ್ರಸಿದ್ಧ ವ್ಯಕ್ತಿಗಳ ಗೋರಿ ಎಂಬುದು ಆತನ ಹೇಳಿಕೆ. ಅವನು ಚರಿತ್ರೆಯ ಮೇಲೆ ಮಾತ್ರವಲ್ಲದೆ ಭಾಷಣಕಲೆಯ ಮೇಲೂ ಅಗಾಧವೂ ಶಾಶ್ವತವೂ ಆದ ಪ್ರಭಾವ ಬೀರಿದ. ಇಲ್ಲಿ ಹೇಸರಿಸಬೇಕಾದ ಮತ್ತೊಬ್ಬ ಗ್ರೀಕ್ ಇತಿಹಾಸಕಾರ ಜೆóನಫನ್. ಈತ ಥ್ಯೂಸಿಡಿಡಿಸನಷ್ಟು ಆಳವಾದ ಚಿಂತನಶಕ್ತಿಯುಳ್ಳವನಾಗಲಿ ಹೀರಡಟಸನಷ್ಟು ಮೋಹಕಗುಣವುಳ್ಳವನಾಗಲಿ ಆಗಿರಲಿಲ್ಲ. ಇದು ಹಾಗಿರಲಿ; ಪ್ರಾಮಾಣಿಕತೆ, ಸ್ಪಷ್ಟತೆ ಹಾಗೂ ಬುದ್ಧಿವಂತಿಕೆಗಳು ಜೆóನಫನ್ನನ ನಿರೂಪಣೆಯ ಲಕ್ಷಣ.

	ರೋಮನ್ ಇತಿಹಾಸ ಲೇಖನ: ಎರಡನೆಯ ಪ್ಯೂನಿಕ್ ಕದನದ ಅಂತ್ಯದವರೆಗೂ ರೋಮ್ ಇತಿಹಾಸ ನಿರ್ಮಾಣ ಮಾಡುತ್ತಿತ್ತೇ ಹೊರತು ಅದನ್ನು ಬರೆಯುತ್ತಿರಲಿಲ್ಲ. ಸುಮಾರು 500 ವರ್ಷಗಳ ವರೆಗೆ ರೋಮಿನಲ್ಲಿ ಒಬ್ಬ ಚರಿತ್ರಕಾರನೂ ಇರಲಿಲ್ಲ. ಆಮೇಲೆ ಇದ್ದಕ್ಕಿದ್ದಂತೆ ಇತಿಹಾಸಮನೋಭಾವ ಮೂಡಿತು. ಈ ಸಾಹಿತ್ಯದ ಘಟನೆಗೆ ದೇಶಭಕ್ತಿಯ ಭಾವನೆಗಿಂತ ಮಿಗಿಲಾಗಿ ಗ್ರೀಕ್ ಸಾಹಿತ್ಯ ಪ್ರಭಾವವೇ ಕಾರಣ. ಮೊದಮೊದಲ ರೋಮನ್ ಇತಿಹಾಸಕಾರರು ಲ್ಯಾಟಿನ್ನಿಗೆ ಬದಲು ಗ್ರೀಕಿನಲ್ಲೇ ಬರೆದರು. ಅತ್ಯಂತ ಪ್ರಾಚೀನ ರೋಮನ್ ಇತಿಹಾಸಕಾರ ಫೇಬಿಯಸ್ ಪಿಕ್ಟರ್. ಆದರೆ ಹಿರಿಯ ಕೇಟೋನಿಂದ (ಕ್ರಿ.ಪೂ. 234-149) ಮಾತ್ರವೇ ರೋಮನ್ ಇತಿಹಾಸ ಲೇಖನದ ವಸ್ತು, ವಿಧಾನ ಮತ್ತು ಭಾಷೆಗಳಲ್ಲಿ ಮಾರ್ಪಾಡಾಯಿತು. ಆತ ರೋಮನ್ ಚರಿತ್ರೆಯ ಸ್ಧಾಪಕ. ರೋಮನ್ ಇತಿಹಾಸ ಲೇಖನಶಾಸ್ತ್ರದಲ್ಲಿಯೇ ಒಂದು ಕ್ರಾಂತಿಯನ್ನುಂಟುಮಾಡಿದ ಸಮರ್ಥ ಲೇಖಕ. ಕೃತಿಯ ಉದ್ದಕ್ಕೂ ಯಾವ ವ್ಯಕ್ತಿಯನ್ನೂ ಹೆಸರಿಸದೆ, ಜನರಲ್, ಅನ್ವೇಷಕ, ಪೌರಸಂಸ್ಧಾನಾಧಿಕಾರಿ, ದಂಡಾಧಿಕಾರಿ, ರಾಯಭಾರಿ ಇತ್ಯಾದಿಯಾಗಿ ಅಧಿಕಾರನಾಮಗಳನ್ನು ಬಳಸಿರುವುದೇ ಆತನ ಬರೆವಣಿಗೆಯ ವೈಶಿಷ್ಟ್ಯ. ಹ್ಯಾನಿಬಾಲನನ್ನು ಕಾರ್ತೇಜಿನ ದಂಡನಾಯಕ ಎಂದು ಕರೆದಿದ್ದಾನೆ. ಅವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಒಂದೇ ಒಂದು ಹೆಸರೆಂದರೆ ಆರಿಜಿನಿಸ್. ಇದು ಸೂರುಸ್ ಎಂಬ ರೋಮನ್ ಸೈನ್ಯದಲ್ಲಿದ್ದ ಒಂದು ಆನೆ. ಆತ ಹೆಸರುಗಳನ್ನು ಕೊಡದಿರಲು ಕಾರಣವೂ ಇತ್ತು. ನಿಜವಾಗಿ ಕಷ್ಟಪಡುವ ಕೃಷಿಕರು, ಸೈನಿಕರು ಮುಂತಾದವರನ್ನು ಬಿಟ್ಟು ಕೇವಲ ಕೆಲವು ಪ್ರಸಿದ್ಧರಾದ ವ್ಯಕ್ತಿಗಳನ್ನೇ ದೊಡ್ಡದು ಮಾಡಿ ಹೇಳುವುದು ತಪ್ಪು ಎಂದು ಆತನ ಭಾವನೆ. ರೋಮನ್ ಇತಿಹಾಸದಲ್ಲಿ ಮುಂದಿನ ಪ್ರಖ್ಯಾತ ಹೆಸರು ಜೂಲಿಯಸ್ ಸೀಸóರ್ (ಮರಣ ಕ್ರಿ.ಪೂ.44). ಆತನೊಬ್ಬ ರಾಜನೀತಿಜ್ಞ. ಯೋಧ, ಭಾಷಣಕಾರ, ಕವಿ, ವೈಯಾಕರಣಿ, ಚರಿತ್ರಕಾರ, ಗಾಲಿಕ್ ಯುದ್ಧವನ್ನು ಕುರಿತ ಅವನ ನಿರೂಪಣೆ ಕೇವಲ ಸೈನಿಕ ವರದಿಯಲ್ಲ. ಆ ಜನತೆಯ ಎಲ್ಲ ಮುಖಗಳ ಇತಿಹಾಸ. ಚರಿತ್ರೆಯಲ್ಲಿ ಸೀಸóರನ ಅನಂತರದ ಕಾಲ ಬಹಳ ಮುಖ್ಯವಾದದ್ದು. ಆಗ ಲೈವೀ ಟ್ಯಾಸಿಟಸ್ ಎಂಬ ಎರಡು ಉಜ್ಜ್ವಲವಾಗಿ ಬೆಳಗಿದುವು. ಲೈವೀ ತನ್ನ ಮೊದಲನೆಯ ಇತಿಹಾಸ ಕೃತಿಯನ್ನು ಕ್ರಿ.ಪೂ. 27ರಲ್ಲಿ ರಚಿಸಿದ. ಆತ ಬರೆದದ್ದಾರೂ ರೋಮಿನ ಹೆಗ್ಗಳಿಕೆಯಲ್ಲಿ ನಂಬುಗೆ ಮತ್ತು ನೂತನ ಸುವರ್ಣಯುಗವೊಂದರ ನಿರೀಕ್ಷೆಗಳಿಂದ. ಅವನು ಹುಟ್ಟಿದ್ದು ಕ್ರಿ.ಪೂ. 59ರಲ್ಲಿ-ಪಡ್ನಾದಲ್ಲಿ. ಸತ್ತದ್ದು ಕ್ರಿ.ಶ. 17ರಲ್ಲಿ-ರೋಮನ್ ಗಣರಾಜ್ಯದ ಪತನವನ್ನೂ ಸಾಮ್ರಾಜ್ಯದ ಉಗಮವನ್ನೂ ಕಂಡಾಗ. ಆಗಸ್ಟಸ್‍ನ ಆಳ್ವಿಕೆಯಿಡೀ ಲೈವೀ ಜೀವಿಸಿದ್ದ. ಅದನ್ನು ಚಕ್ರಾಧಿಪತ್ಯದ ಸುವರ್ಣಯುಗವೆಂದು ಯಥಾರ್ಥವಾಗಿ ಕರೆಯಲಾಗಿದೆ. ರೋಮನ್ ಇತಿಹಾಸವನ್ನು ಲೈವೀ ಮೂರು ಘಟ್ಟಗಳಾಗಿ ವಿಭಾಗಿಸುತ್ತಾನೆ. ಭವ್ಯಯುಗ, ಪ್ರಾಚೀನ ಯುಗ ಮತ್ತು ಆಧುನಿಕ ಯುಗ. ತಾನು ಏನನ್ನು ಬರೆಯಬೇಕು ಎಂಬುದರ ಸ್ಪಷ್ಟಚಿತ್ರ ಅವನಿಗಿತ್ತು. ಯುದ್ಧಗಳ ವರ್ಣನೆಯಲ್ಲಿ ಮಿತ. ಆದರೆ ಆ ಯುದ್ಧವನ್ನುಂಟುಮಾಡಿದ ಕಾರಣಗಳು, ಪರಿಸ್ಧಿತಿಗಳು ಮತ್ತು ಪ್ರಕ್ರಿಯೆಗಳನ್ನು ನಿರೂಪಿಸುವಲ್ಲಿ ವಿಸ್ತಾರ-ಇದು ಅವನ ಬರೆವಣಿಗೆಯ ಲಕ್ಷಣ. ಲೈವೀಯ ದೃಷ್ಟಿಯಲ್ಲಿ ಚರಿತ್ರೆ ಕಾವ್ಯಾತ್ಮಕ ಅಭಿವ್ಯಕ್ತಿಯ ಒಂದು ಮಾದರಿ. ನೀತಿಯನ್ನೂ ಪೌರಲಕ್ಷಣಗಳನ್ನೂ ಬೋಧಿಸಿ ರಾಷ್ಟ್ರಪ್ರೇಮವನ್ನು ಉಕ್ಕಿಸುವುದೇ ಉದ್ದೇಶ. ಚರಿತ್ರೆ ಒಂದು ಕಲೆ, ವಿಮರ್ಶಾತ್ಮಕ ವಿಜ್ಞಾನವಲ್ಲ. ಹಾಗಾಗಿ ಅವನ ಕೃತಿಯಲ್ಲಿ ವಿರೋಧಗಳೂ ಕಾಲ ನಿರ್ಣಯದ ದೋಷಗಳು ಬಹಳ ಇವೆ. ವರ್ಣನಾಶಕ್ತಿ ಹಾಗೂ ಶಬ್ದ ಮಾಧ್ಯಮದಿಂದ ವ್ಯಕ್ತಿಚಿತ್ರ ನಿರ್ಮಾಣ-ಇವು ಆತನ ಲೇಖನದ ಸಲ್ಲಕ್ಷಣಗಳು. ಆತ ಬರೆದ ಜೀವನಚರಿತ್ರೆಗಳಂತೂ ಅತ್ಯಂತ ಸುಂದರ.

	ಲೈವೀಯ ಅನಂತರ ಮುಖ್ಯನಾದವನೆಂದರೆ ಸಿ. ಕಾರ್ನೀಲಿಯಸ್ ಟ್ಯಾಸಿಟಸ್; ರೋಮನ್ ಇತಿಹಾಸಲೇಖಕರಲ್ಲಿ ಇವನದು ಅತ್ಯಂತ ಶ್ರೇಷ್ಠನಾಮ. ಗ್ರೀಕ್ ಇತಿಹಾಸ ಲೇಖಕರಲ್ಲಿ ಥ್ಯೂಸಿಡಿಡಿಸನ ಹಾಗೆ ಈತ ವಿಪುಲವಾಗಿ ಬರೆದಿದ್ದಾನೆ. ಕ್ರಿ.ಶ. 55ರಲ್ಲಿ ಹುಟ್ಟಿದ ಈತ ಸತ್ತದ್ದು ಸುಮಾರು 120ರಲ್ಲಿ. ಇವನದು ಶ್ರೀಮಂತ ಮನೆತನ. ಪತ್ರಾಗಾರದಲ್ಲಿ ಕುಳಿತು ಬೇಕಾದಷ್ಟು ಸಂಶೋಧನೆಗಳನ್ನು ಮಾಡಿದನಾದರೂ ಈತ ಅನುಸರಿಸಿದ ವಿಧಾನ ಮಾತ್ರ ಒಬ್ಬ ಭಾಷಣಕಾರನದು. ಇವನಿಗೆ ವಿಷಯಗಳನ್ನು ಖಚಿತವಾಗಿ ತಿಳಿದುಕೊಂಡು ಅವನ್ನು ವಾಸ್ತವವಾಗಿ ನಿರೂಪಿಸುವುದರಲ್ಲಿ ಆಸಕ್ತಿ ಕಡಿಮೆ; ಆದರೆ ಚಕ್ರವರ್ತಿಗಳನ್ನು, ಆ ಮೂಲಕ ಸಾರ್ವಭೌಮ ಅಧಿಕಾರವನ್ನು ಆಕ್ಷೇಪಿಸುವುದರಲ್ಲಿ ಹೆಚ್ಚು ಇಷ್ಟ; ಅತ್ಯುನ್ನತ ವಿಶ್ಲೇಷಣ ಶಕ್ತಿ, ಮನಶ್ಯಾಸ್ತ್ರೀಯ ಹಾಗೂ ಶೀಲಗುಣ ವಿಶ್ಲೇಷಣೆಯಲ್ಲಿ ಇವನದು ಎತ್ತಿದ ಕೈ. ಇದರೊಂದಿಗೆ ಮಹತ್ತಮ ವಿಡಂಬನಯುಕ್ತಿಯೂ ಇದೆ. ಆದರೆ ಚಾರಿತ್ರಿಕ ಸತ್ಯ ದೃಷ್ಟಿಯಿಂದ ಹೇಳುವುದಾದರೆ ಅವನ್ನು ಓದುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಏಕೆಂದರೆ ಅವನು ಮಕಾಲೆಯ ಹಾಗೆ. ವಿಷಯಗಳ ಖಚಿತತೆಗಿಂತ ಸಾಹಿತ್ಯಕ ಪ್ರತಿಭೆಗೆ ಹೆಸರಾದವ. ಪ್ರಥಮತಃ ನೀತಿಬೋಧಕನಾದ ಟ್ಯಾಸಿಟಸ್ಸನಿಗೆ ಚರಿತ್ರೆಯೂ ಒಂದು ನೀತಿಪಾಠ. ಅವನ ಶೈಲಿ ಸ್ವಲ್ಪ ಪೆಡಸಾದರೂ ಭಾವಗರ್ಭಿತ. ಕೆಲವೊಮ್ಮೆ ಅವನ ಆಲೋಚನೆಗಳು ಬಲು ಸಂಕ್ಷಿಪ್ತ, ಸಾಂದ್ರ, ಭಾರ. ಅವುಗಳ ಅಡಿಯಲ್ಲಿ ಭಾಷೆ ಮುಚ್ಚಿಹೋದಂತೆ ಕಾಣುತ್ತದೆ. ಆತ ಪ್ರಮುಖವಾಗಿ ತಾತ್ತ್ವಿಕ ಚರಿತ್ರಕಾರ. ಹಾಗೆಯೇ ಮಹಾನ್ ರೋಮನ್ ಇತಿಹಾಸಕಾರರಲ್ಲಿ ಬಹುತೇಕ ಕೊನೆಯವ.

	ಚರ್ಚ್ ಇತಿಹಾಸ ಲೇಖನ: ಕ್ರಿ.ಶ. 5ನೆಯ ಶತಮಾನದಿಂದ 13ನೆಯ ಶತಮಾನದ ವರೆಗೆ-ಹತ್ತಿರ ಹತ್ತಿರ 800 ವರ್ಷಗಳ ಕಾಲ-ಕ್ರೈಸ್ತ ಲೇಖಕರು ಈ ಕ್ಷೇತ್ರವನ್ನಾಳಿದರು. ಅವರೆಲ್ಲರೂ ಧರ್ಮಾಧಿಕಾರಿಗಳು. ಅವರು ಬರೆದ ಸುವಾರ್ತೆಗಳಲ್ಲಿ ಚಾರಿತ್ರಿಕ ಮೌಲ್ಯ ಬಲು ಕಡಿಮೆ. ಏಕೆಂದರೆ ಧಾರ್ಮಿಕ ಕೃತಿಗಳೆಂದೇ ಅವುಗಳ ರಚನೆ; ಚರಿತ್ರೆಗಳೆಂದಲ್ಲ. ಅಲ್ಲದೆ ಅವು ಸಾಮಾನ್ಯವಾಗಿ ಭಾವಿಸಿರುವುದಕ್ಕಿಂತ ಈಚಿನ ಕಾಲದವು. ಮೊದಲಿನಿಂದಲೂ ಚರ್ಚ್ ಇತಿಹಾಸಲೇಖನ ವಿಕ್ಷಿಪ್ತವಾದದ್ದು. ಇದಕ್ಕೆ ನಾನಾ ಕಾರಣಗಳುಂಟು. ಅದು ಯಹೂದ್ಯರ ಇತಿಹಾಸವನ್ನೇ ಕ್ರಿ.ಪೂ. ಇತಿಹಾಸವೆಂದು ಬಗೆದು. ಅದರಲ್ಲಿ ಸತ್ಯಾಂಶವಿಷ್ಟು, ನಂಬಿಕೆಯ ಅಂಶವಿಷ್ಟು ಎಂದು ವಿವೇಚಿಸದೆಯೇ ಒಪ್ಪಿಕೊಂಡದ್ದು ಮೊದಲನೆಯ ಕಾರಣ. ದಿವ್ಯದರ್ಶನವೂ ಜ್ಞಾನಸಂಪಾದನೆಗೊಂದು ಮುಖ್ಯ ಮೂಲವೆಂದು ಅವರು ತಿಳಿದದ್ದು ಎರಡನೆಯ ಕಾರಣ. ಇದು ಧರ್ಮದಲ್ಲಿ ಸ್ವೀಕೃತವಾದರೂ ಚಾರಿತ್ರಿಕ ತತ್ತ್ವಗಳಿಗೆ ವಿರುದ್ಧ. ಮೂರನೆಯದಾಗಿ ಪವಿತ್ರ ಅಥವಾ ಧಾರ್ಮಿಕ ಇತಿಹಾಸವನ್ನು ಏಕೈಕ ಸತ್ಯ ಇತಿಹಾಸವೆಂದು ಪರಿಗಣಿಸಿ, ಲೌಕಿಕ ಇತಿಹಾಸವನ್ನು ತೀವ್ರದೋಷಗಳು ತುಂಬಿದುವು. ಶಾಸ್ತ್ರೀಯವೆಂದು ಅದನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ. ವಿಷಯಗಳ ಪ್ರಾಮಾಣಿಕ ವ್ಯಾಖ್ಯಾನದ ಮೇಲೆ ಅವಲಂಬನಗೊಂಡ ಕ್ರೈಸ್ಥಧರ್ಮದ ಚರಿತ್ರೆಯೊಂದು ಇಲ್ಲದ್ದಕ್ಕಾಗಿ ಗಯಟೆಮರುಗಿದ.

	ಚರ್ಚ್ ನಿಜವಾಗಿ ಐತಿಹಾಸಿಕ ಪ್ರವೃತ್ತಿ ಪಡೆಯುವುದಕ್ಕೆ ಮೂರು ಶತಮಾನಬೇಕಾದವು. ಗ್ರೀಕ್ ಮತ್ತು ರೋಮನ್ ಸಮಾಜಗಳು ವ್ಯಕ್ತಿಯನ್ನು ರಾಜ್ಯಕ್ಕೆ ಅಧೀನವಾಗಿ ಮಾಡಿದ್ದವು. ಆದರೆ ಕ್ರೆøಸ್ತಧರ್ಮ ಗುರುತ್ವಕೇಂದ್ರವನ್ನು ರಾಜ್ಯದಿಂದ ವ್ಯಕ್ತಿಗೆ ವರ್ಗಾಯಿಸಿತು. ಹಾಗೆಯೇ ಅದು ವರ್ತಮಾನದಿಂದ ಭವಿಷ್ಯತ್ತಿಗೆ ಬದಲಾಯಿಸಿತು. ಪ್ರಾಚೀನ ಕ್ರೈಸ್ತರಿಗೆ ಗತಕಾಲದಲ್ಲಿ ಆಸಕ್ತಿಯಿರಲಿಲ್ಲ. ಆದರೆ ಕಾಲಕ್ರಮೇಣ ಚರಿತ್ರೆಯ ಅಗತ್ಯ ವ್ಯಕ್ತವಾಯಿತು. ಚರ್ಚಿನ ನಿಷ್ಠಾವಂತರ ನಂಬಿಕೆಯನ್ನು ಬಲಪಡಿಸುವುದಕ್ಕೂ ಆತ್ಮೋನ್ನತಿಗೂ ಚರಿತ್ರೆಯ ಬೆಂಬಲ ಬೇಕಾಯಿತು.

	ಮೊದಲನೆಯ ಮುಖ್ಯ ಕ್ರೈಸ್ತ ಚರಿತ್ರಕಾರ ಸೆಕ್ಸ್‍ಟಸ್ ಜೂಲಿಯಸ್ ಆಫ್ರಿಕಾನಸ್. ಆದರೆ ಮಠೀಯ ಇತಿಹಾಸದ ಪಿತಾಮಹ ಯೂಸಿಬಿಯಸ್ (260-340). ಈತ ರೋಮನ್ ಸಾಮ್ರಾಜ್ಯದ ಅತ್ಯಂತ ಶ್ರೀಮಂತ ಗ್ರಂಥಭಂಡಾರವಿದ್ದ ಪ್ಯಾಲೆ ಸ್ಟೈನಿನಲ್ಲಿದ್ದು ಕೆಲಸಮಾಡಿದ. ಏಬ್ರಹಾಮನ ಜನನದಿಂದ ಈತನ ಚರಿತ್ರೆ ಪ್ರಾರಂಭ. ಯೂಸಿಬಿಯಸನ ಕೃತಿಗಳಿಂದಾಗಿ ಚರಿತ್ರ ಲೇಖನಗಳ ಒಂದು ಸಮೂಹವೇ ಸೃಷ್ಟಿಯಾಯಿತು. ಸಂತರನ್ನು ಮೇಲೇರಿಸಿರುವುದೇ ಚರ್ಚ್ ಇತಿಹಾಸದ ವೈಶಿಷ್ಟ್ಯ-ಪೇಗನರಲ್ಲಿ ಪ್ರಚಲಿತವಿದ್ದ ನಾಯಕಪೂಜೆಯ ತೆರ. ಮತ್ತೊಬ್ಬ ಪ್ರಸಿದ್ಧ ಇತಿಹಾಸಕಾರ 5ನೆಯ ಶತಮಾನದ ಸಲ್ಪಿಸಿಯಸ್ ಸೆವೆರಸ್. ವಿವೇಚನೆ ಹಾಗೂ ರಚನಾತ್ಮಕ ಚಿಂತನೆಯೇ ಇವನ ಬರೆಹದ ಗುಣ. ಹಿಂದಿನವರಲ್ಲಿ ಯಾರೂ ಇವನು ಹೊಂದಿದ್ದ ಮಟ್ಟದಲ್ಲಿ ಇತಿಹಾಸದ ನಿರಂತರತೆಯ ಕಲ್ಪನೆ ಹೊಂದಿರಲಿಲ್ಲ. ಚರ್ಚಿನ ಅತ್ಯಂತ ಶ್ರೇಷ್ಠ ಇತಿಹಾಸಕಾರ ಸೇಂಟ್ ಆಗಸ್ಟೀನ್ (354-430). ಇವನೊಬ್ಬ ದೇವತಾ ಶಾಸ್ತ್ರಜ್ಞ, ಉಪದೇಶಕ, ಉಪಾಧ್ಯಾಯ, ಕವಿ, ಚಿಂತಕ. ದೇವರ ನಗರವೆಂಬುದು ಈತನ ಹಿರಿಯ ಕೃತಿ. ಇದನ್ನು 22 ಸಂಪುಟಗಳಲ್ಲಿ ಬರೆದ. ಇದು ವಿಶ್ವದ ಅತಿ ಶ್ರೇಷ್ಠ ಗ್ರಂಥಗಳಲ್ಲೊಂದು. ರಾಜ್ಯ ಮನುಷ್ಯನಿರ್ಮಿತ. ಆದ್ದರಿಂದ ಇದರಲ್ಲಿ ಕೆಡುಕು ಧಾರಾಳ. ಆದರೆ ಭಗವಂತನ ಸಾಮ್ರಾಜ್ಯವಾದರೋ ಸ್ವರ್ಗ. ಚರ್ಚಿಗೆ ದೈವೀ ತಳಹದಿಯಿದೆ. ಭೂಮಿಯ ಮೇಲೆ ಆ ಸ್ವರ್ಗೀಯ ದರ್ಶನವನ್ನು ಎಷ್ಟರ ಮಟ್ಟಿಗೆ ಅರಿತುಕೊಳ್ಳಲು ಸಾಧ್ಯವೋ ಅಷ್ಟು ಅದರ ಅಧಿಕಾರ. ಚರ್ಚಿನ ರಾಜ್ಯ, ಸ್ವರ್ಗ ರಾಜ್ಯದ ಪ್ರತಿಬಿಂಬ. ಶಾಶ್ವತವಾದ ದೇವರ ರಾಜ್ಯದೆದುರು ಭೂಮಿಯ ಸಾಮ್ರಾಜ್ಯದ ವೈಭವಗಳೆಲ್ಲ ಕಳಾಹೀನ. ಮಾನವನ ಆಗುಹೋಗುಗಳನ್ನು ಕುರಿತು ನಗಬೇಕಾಗಿಲ್ಲ. ದುಃಖಪಡಬೇಕಾದದ್ದೂ ಇಲ್ಲ. ಅವುಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಬೇಕು. ಈ ಕೃತಿ ಸಾರುವ ಸಂದೇಶ. ಇದು ಮಧ್ಯಯುಗದ ಅತ್ಯಂತ ಪ್ರಭಾವಯುತವಾದ ರಾಜಕೀಯ ತತ್ತ್ವದ ನಿರೂಪಣೆಯಿದು. ಮಾನವನ ಆಗುಹೋಗುಗಳು ಭಗವಂತನಿಂದ ನಿಯಂತ್ರಿತ. ಅವನ ಕೈಯಲ್ಲಿನ ಕೇವಲ ಕುರುಡು ಉಪಕರಣಗಳೇ ಮಾನವರು. ಇವನನ್ನು ನಡೆಸುವ ದಾರಿ. ವಿಧಾನಗಳು ಅವನೊಬ್ಬನಿಗೇ ಗೊತ್ತು. ಆದರೆ ಅವು ಅತ್ಯಂತ ಅರ್ಥಪೂರ್ಣವಾದ ದಾರಿಗಳು. ರಾಜ್ಯ ಮತ್ತು ಚರ್ಚು ಇವುಗಳ ನಡುವಣ ಸಂಬಂಧವನ್ನು ಕುರಿತು ವಿವೇಚನೆ ನಡೆಸುವ ಯತ್ನವಾದದ್ದು ಅದೇ ಮೊದಲು. ಮುಂದೆ ಬಂದ ಎಲ್ಲ ಪೋಪರೂ ಆಗಸ್ಟೀನನ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ಸಾಮ್ರಾಜ್ಯದ ಮೇಲೆ ಪೋಪರ ಮೇಲ್ಮೆಯನ್ನು ಪ್ರತಿಪಾದಿಸಿದರು. ಉತ್ತಮ ಕಾನೂನುಗಳನ್ನೂ ಮಾನವನ ವ್ಯವಹಾರಗಳಿಗೆ ಉನ್ನತ ಸಿದ್ಧಾಂತವನ್ನೂ ನೀಡುವುದೇ ಅದರ ಗುರಿ. ಹೀಗಾಗಿ, ಪ್ಲೇಟೋವಿನ ರಿಪಬ್ಲಿಕ್, ಸರ್ ಥಾಮಸ್ ಮೋರನ ಯುಟೋಪಿಯ, ಫ್ರಾನ್ಸಿಸ್ ಬೇಕನನ ಅಟ್ಲಾಂಟಿಸ್ ಮತ್ತು ಕ್ಲಾಂಪನೆಲ್ಲಾನ ಸಿಟಿ ಆಫ್ ದಿ ಸನ್‍ಗಾಡ್‍ಗಳ ಶ್ರೇಣಿಯಲ್ಲಿ ಅವರ ಕೃತಿಗಳು ನಿಲ್ಲುತ್ತವೆ.

	ಅರಬ್ಬೀ ಇತಿಹಾಸ ಲೇಖನ: ಇಸ್ಲಾಮ್ ಪೂರ್ವ ಇತಿಹಾಸಲೇಖನವೇನಿದ್ದರೂ ಅರ್ಧ ಪುರಾಣ; ಅರ್ಧ ಚರಿತ್ರೆ. ಕಾವ್ಯವೇ ಚರಿತ್ರೆಯ ವಾಹಕ. ಮಹಮದ್ ಬಿನ್ ಇಷ್ಕಾಲ್ (ಮರಣ 767) ಪ್ರವಾದಿ ಮಹಮ್ಮದನ ಜೀವನವನ್ನು ಕುರಿತು ಬರೆದ ಮೊಟ್ಟಮೊದಲ ಚರಿತ್ರಕಾರ. ಎಲ್ಲ ಸಿಮೆಟಿಕ್ ಜನರಂತೆಯೇ ಅರಬ್ಬರು ಪೀಳಿಗೆಯ ಬಗ್ಗೆ ನಿಷ್ಠೆಯುಳ್ಳವರು. ಚರಿತ್ರೆಗೆ ಅರಬ್ಬರ ಅತ್ಯಮೂಲ್ಯವಾದ ಕೊಡುಗೆಯೆಂದರೆ. ಇಸ್‍ನಾದ್. ಘಟನೆಯಲ್ಲಿ ಭಾಗವಹಿಸಿದವರ ಅಥವಾ ಅದನ್ನು ಕಣ್ಣಾರೆ ಕಂಡ ಮೂಲ ವ್ಯಕ್ತಿಗಳ ಅಧಿಕೃತ ಸಾಕ್ಷ್ಯ ಸರಣಿಯ ಮೇಲೆ ಕಟ್ಟಿದ ನಿರೂಪಣೆಯೆಂದು ಇದರ ಅರ್ಥ. ಎಚ್ಚರಿಕೆಯಿಂದ ಕಾಲ ನಿರ್ಣಯ ಮಾಡುವ ಕ್ರಮ ಇದರಲ್ಲಿ ಅಡಕವಾಗಿತ್ತು. ಮುಸ್ಲಿಂ ಕಾಲಗಣನೆ ಹಿಜಿರದಿಂದ, ಅಂದರೆ ಮಹಮದ್ ಮೆಕ್ಕದಿಂದ ಓಡಿಹೋದಾಗಿನಿಂದ (ಕ್ರಿ.ಶ.622) ಪ್ರಾರಂಭವಾಗುತ್ತದೆ. ಇದು ಕಾಲಾನುಕ್ರಮಣಿಕೆಯ ಏಕರೂಪತೆ ಸರಳತೆಗಳನ್ನು ಆಗ ಮಾಡಿತು.

	ಅರಬ್ಬೀ ಸಾಹಿತ್ಯದ ಅಭಿಜಾತಯುಗ ಕ್ರಿ.ಶ. 750ರಿಂದ 1000ರ ವರೆಗೆ ವ್ಯಾಪಿಸುತ್ತದೆ. ಮೊದಲಿಗೆ ಮದೀನವೇ ಜ್ಞಾನ ಕೇಂದ್ರವಾಗಿದ್ದು, ಬೇಗನೆ ಅದು ದಮಾಸ್ಕಸಿಗೂ ಆಮೇಲೆ ಬಾಗ್ದಾದಿಗೂ ವರ್ಗಾವಣೆ ಹೊಂದಿತು. ಮುಸ್ಲಿಂ ಇತಿಹಾಸ ಲೇಖನ ಅಚ್ಚರಿಗೊಳಿಸುವಷ್ಟು ಮಟ್ಟಿಗೆ ಹಿಂದಿನ ಸಂಪ್ರದಾಯದಿಂದ ವಿಮುಕ್ತವಾಗಿತ್ತು. ಯಾವುದೇ ಬಗೆಯಾದ ಗ್ರೀಕ್ ಅಥವಾ ರೋಮನ್ ಪ್ರಭಾವ ಅದರ ಮೇಲೆ ಬಿದ್ದಿರಲಿಲ್ಲ. ಇಸ್ಲಾಮೀ ಸಾಮ್ರಾಜ್ಯದ ವಿಸ್ತರಣದಿಂದ ದೇವತಾಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಭಾಷಾಶಾಸ್ತ್ರಗಳನ್ನು ಬೆಳೆಸಲಾಯಿತು. ಅವುಗಳಿಂದ ಚರಿತ್ರೆ ಹೊರಚಿಮ್ಮಿತು. ಅಬ್ಬಾಸಿದ್ ಯುಗದ ಪ್ರಾರಂಭದಿಂದ (750) ಮುಂದಣ ಇತಿಹಾಸ ಹೊಸಬಗೆಯ ಭವ್ಯತೆ, ಗಾಂಭೀರ್ಯಗಳನ್ನು ಪ್ರದರ್ಶಿಸತೊಡಗಿದಾಗ ವಿಶ್ವಕೋಶ ಸದೃಶ ಪಂಡಿತ ಭಾಷೆಗೆ ಅನುವಾದವಾದವು. ಇದರಿಂದ ಚರಿತ್ರ ಲೇಖನಕ್ಕೆ ಹೊಸದೊಂದು ಪ್ರಚೋದನೆ ಲಭಿಸಿತು. ಇಬ್ನ್ ಯಾಹ್ಯ (ಮರಣ 774) ಎಂಬುವನು ಬೇರೆ ಬೇರೆ ವ್ಯಕ್ತಿಗಳನ್ನು ಕುರಿತ 33 ಪ್ರಬಂಧಗಳನ್ನು ಬರೆದ. ಆದರೆ ಅವನ ಮಹತ್ವದ ಕೃತಿ ಇರಾಕ್ ವಿಜಯ ಕುರಿತ ಚರಿತ್ರೆ. ವಾಕಿದಿ (760-837) ಎಂಬುವನು ಕಿತಾಬ್-ಅಲ್-ಮಗಾಜಿಯನ್ನು ಬರೆದ. ಅದು ಇಸ್ಲಾಮಿನ ಸೈನ್ಯ ವಿಸ್ತರಣವನ್ನು ಕುರಿತ ಬರಹ. ಅವನು ಪ್ರವಾಸದಲ್ಲಿ ಯಾವಾಗಲೂ ತನ್ನ ಇಡೀ ಗ್ರಂಥ ಭಂಡಾರವನ್ನು 120 ಒಂಟೆಗಳ ಮೇಲೆ ಹೇರಿ ಒಯ್ಯುತ್ತಿದ್ದ. ಅಲ್‍ಮದೈನಿ (830-845) ಇನ್ನೊಬ್ಬ ಚರಿತ್ರಕಾರ. ಉತ್ತರ ಆಫ್ರಿಕ ಸ್ಪೇನಗಳಲ್ಲಿ ಇಸ್ಲಾಂ ಪ್ರಸಾರವೇ ಇವನ ಕೃತಿವಸ್ತು. ಸಿರಿಯ, ಮೆಸೊಪೊಟೇಮಿಯ, ಆರ್ಮೀನಿಯ, ಈಜಿಪ್ಟ್, ಸೈಪ್ರಸ್, ಆಫ್ರಿಕ ಮತ್ತು ನ್ಯೂಬಿಯಗಳ ವಿಜಯವನ್ನು ಕುರಿತದ್ದು, ಅಲ್‍ಬಲಾಧುರಿಯ ಕೃತಿ. ಆತನ ಎಲ್ಲ ಕೃತಿಗಳ ಹೆಸರುಗಳನ್ನು ಪಟ್ಟಿ ಮಾಡಲು ಅಚ್ಚಿನ ಐದು ಪುಟ ಬೇಕು. ಅಲ್-ಫಖ್ರಿ ಆ ಯುಗದಲ್ಲಿ ಬಂದ ಮತ್ತೊಬ್ಬ ಚರಿತ್ರಕಾರ. ಅವನ ಬರೆವಣಿಗೆ ಚಿತ್ರಪೂರ್ಣ. ಆಲ್ಬೆರೂನಿ (1048) ಹಿಂದಿನ ತಲೆಮಾರಿನ ಉಳಿದಿರುವ ಸ್ಮಾರಕದ ಕರ್ತೃ. ಆತನ ಭಾರತಚರಿತ್ರೆ ವಿಷಯದಲ್ಲೂ ವೈಜ್ಞಾನಿಕ ವಿಧಾನದಲ್ಲೂ ಅರಬ್ಬೀ ಸಾಹಿತ್ಯದಲ್ಲೇ ಅಪೂರ್ವ, ಐತಿಹಾಸಿಕ ವಿಮರ್ಶೆಯ ನಿಜ ಮನೋಭಾವ ಪ್ರದರ್ಶಕ. ಹಲವು ಹಿಂದೂ ಕೃತಿಗಳನ್ನು ಆತ ಅರಬ್ಬೀ ಭಾಷೆಗೂ ಗ್ರೀಕ್ ಕೃತಿಗಳನ್ನು ಸಂಸ್ಕ್ರತಕ್ಕೂ ಅನುವಾದಿಸಿದ.

	ಅರಬ್ಬರು ರಚಿಸಿದ ಅಸಾಧಾರಣ ಕೃತಿಗಳೆಂದರೆ ಪ್ರವಾಸ ಸಾಹಿತ್ಯ. ಇಸ್ಲಾಮಿ ಸಾಮ್ರಾಜ್ಯದ ವ್ಯಾಪಕಸ್ವರೂಪ, ಹಾಜ್‍ಯಾತ್ರಿಕರು ಮೆಕ್ಕಕ್ಕೆ ಹೋಗುವ ಸಾರ್ವತ್ರಿಕ ಪರಿಪಾಟಿ, ಆಡಳಿತದ ಅಗತ್ಯ-ಈ ಎಲ್ಲ ಕಾರಣಗಳಿಂದ ಭೌಗೋಳಿಕ ಕೃತಿ ರಚನೆಗೆ ಇವರಲ್ಲಿ ಪ್ರಚೋದನೆ ದೊರಕಿತು. ಮಧ್ಯ ಆಫ್ರಿಕ, ಮಧ್ಯ ಏಷ್ಯಗಳಿಗೆ ಇಸ್ಲಾಂ ಪ್ರವೇಶಿಸಿದ್ದೂ ನೀಗ್ರೊ ಪ್ರದೇಶಗಳ ಚರಿತ್ರೆಯನ್ನು ಬರೆದದ್ದೂ ಅರಬ್ಬರ ಸಾಧನೆ. ಪ್ರವಾಸ ಮಾಲಿಕೆಗಳನ್ನು ಬರೆದ ಮುಖ್ಯ ಮುಸ್ಲಿಂ ಬರೆಹಗಾರರೆಂದರೆ ಮಸೂದಿ. ಇಬ್ನ್‍ಹಕಲ್, ಇಬ್ನ್-ಬತೂತ ಮತ್ತು ಇಬ್ನ್-ಖಾಲ್ದೂನ್ (1322-1406). ಮಾನವನ ಜೀವನದ ಸಮಸ್ತಸಾಮಾಜಿಕ ಅಂಶಗಳೂ ಚರಿತ್ರೆಯ ವಸ್ತುವೆಂಬುದನ್ನು ಮೊತ್ತಮೊದಲು ಪ್ರತಿಪಾದಿಸಿದವನು. ಆದರೂ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಇಬ್ನ್ ಖಾಲ್ದೂನನ ಹೆಸರು ಐರೋಪ್ಯ ವಿದ್ವತ್ ಪ್ರಪಂಚಕ್ಕೆ ತಿಳಿದಿರಲಿಲ್ಲ.

	ಜ್ಞಾನಯುಗದ ಇತಿಹಾಸ ಲೇಖನ: ಪ್ರಾಚೀನ ಜನರೆಲ್ಲ ಅತ್ಯಂತ ಬುದ್ಧಿವಂತರೇನೂ ಆಗಿರಲಿಲ್ಲವೆಂಬುದೂ ಆಧುನಿಕ ಪ್ರಪಂಚದ ಜನರಲ್ಲಿ ಕನಿಷ್ಠ ಪರಿಣತ, ಗರಿಷ್ಠ ಪರಿಣತ ಹಾಗೂ ಪಕ್ವಮನಸ್ಕರಾದವರು ಇದ್ದಾರೆಂಬ ಭಾವನೆ ಮೂಡಿದ್ದೂ ಪುನರುಜ್ಜೀವನಕಾಲದಲ್ಲಿ. ಗ್ರೀಕ್, ರೋಮನ್ ಪ್ರಪಂಚದಲ್ಲಿದ್ದಂತೆ ಅಧಿಕಾರದ ಆಡಳಿತದ ಬದಲು ಶುದ್ಧ ವಿಚಾರಶಕ್ತಿಗೆ ಪ್ರಾಮುಖ್ಯ ಬಂತು. ರಾಷ್ಟ್ರೀಯ ಭಾಷೆಗಳ ಬಗ್ಗೆ ಪಕ್ಷಪಾತ ತೋರಿಸಿ ಲ್ಯಾಟಿನ್ನನ್ನು ತಿರಸ್ಕರಿಸಲಾಯಿತು. ಕತೆಗಳಿಗೆ ಹಾಗೂ ಪ್ರಾಚೀನ ಇತಿಹಾಸಕಾರರ ಬರವಣಿಗೆಗಳಿಗೆ ವಿಮರ್ಶೆಯನ್ನು ಅನ್ವಯಿಸಲಾಯಿತು. ಹಾಗಿದ್ದರೂ ಪ್ರಾಚೀನರನ್ನು ಅನುಕಂಪೆಯ ದೃಷ್ಟಿಯಿಂದಲೂ ಮಧ್ಯಯುಗದವರನ್ನು ತಿರಸ್ಕಾರದಿಂದಲೂ ಕಾಣಲಾಯಿತು. ಬೆಳಕು, ಪ್ರಭೆ ಮುಂತಾದ ಪದಗಳ ನಿರ್ಮಾಣವಾಯಿತು. ಪ್ರಾಚೀನರ ನಸುಬೆಳಕಿನ ಮುಂದಣ ಮಧ್ಯಯುಗದ ಕತ್ತಲಿನಿಂದ ಹೊರಬಂದ ಯುಗವೆಂದು ಇದನ್ನು ಕರೆಯಲಾಯಿತು. ಪ್ರಗತಿ ಎಂಬ ಪದವೂ ಪ್ರಚಲಿತವಾಯಿತು. ಚೇತನದ ಗತಿ, ಚರಿತ್ರೆಯ ನಿರ್ಮಾಣ, ಮಾನವ ಚೇತನದ ಪ್ರಗತಿಯ ಚರಿತ್ರೆ ಇವನ್ನೆಲ್ಲ ಸೂಚಿಸುವುದಕ್ಕೂ ವಸ್ತುವಿವರಗಳನ್ನು ಪರೀಕ್ಷಿಸಲಿಕ್ಕೂ ಆಧಾರವಾಗಿ ಇದು ಬಳಕೆಗೆ ಬಂತು.

	ಆದರೆ ಚರಿತ್ರೆಯ ದೃಷ್ಟಿಯಲ್ಲಿ ಪ್ರಗತಿಯೆನಿಸುವ ಯಾವ ಬೆಳೆವಣಿಗೆಯೂ ಈ ಯುಗದಲ್ಲಾಗಲಿಲ್ಲ. ವಿಚಾರದ ಆದರ್ಶವಿನ್ನೂ ಬಲು ದೂರವಿತ್ತು. ರೂಸೋನ ಸಾಮಾಜಿಕ ಕರಾರಿನಂಥ ಒಂದು ತತ್ತ್ವದಿಂದ ಸಾಮಾನ್ಯ ದೃಷ್ಟಿಕೋನವೇ ತಲೆಕೆಳಗಾಯಿತು. ಇತಿಹಾಸ ಪೂರ್ವಕಾಲದಲ್ಲಿತ್ತೆಂದು ಭಾವಿಸಲಾಗಿದ್ದ. ಆದರೆ ಆಗಲೂ ಬರಿಯ ಆದರ್ಶವೆನಿಸಿದ್ದ, ವೈಚಾರಿಕ ಮನೋಧರ್ಮದಲ್ಲಿ ದೃಷ್ಟಿ ನೆಟ್ಟಿತು. ಇತಿಹಾಸದ ಧಾರ್ಮಿಕ ದೃಷ್ಟಿ ಬೇಡವಾಯಿತು. ಈ ಧಾರ್ಮಿಕ ದೃಷ್ಟಿಯಿಂದ ಸಂಭವಿಸಿದ ಭೀಕರ ಬಡಿದಾಟಗಳೂ ಧರ್ಮಾಂಧತೆಯ ಯುದ್ಧಗಳೂ ಇಂಥ ಪ್ರತಿಕ್ರಿಯೆಗೆ ಮುಖ್ಯ ಕಾರಣ. ಅಮೂರ್ತವಾದ ವ್ಯಕ್ತಧರ್ಮದ ಅಥವಾ ವಾಸ್ತವ ಪ್ರಯೋಜನ ಪ್ರಮಾಣವಾದದ ಕಲ್ಪನೆ ಕೂಡ ಈ ಯುಗದಲ್ಲಿ ಬೆಳೆಯಿತು. ಈ ಮನೋಭಾವವೇ ಧರ್ಮಗಳಿಗೂ ಚರ್ಚೆಗೂ ಹರಡಿತು. ಪುರೋಹಿತರು ವಂಚಿಸುತ್ತಾರೆ. ಆಸ್ಧಾನಿಕರು ಒಳಸಂಚು ನಡೆಸುತ್ತಾರೆ. ವಿವೇಕಿಗಳಾದ ಅರಸರು ಒಳ್ಳೆಯ ವ್ಯವಸ್ಧೆಗಳ ಕಾಣ್ಕೆಯನ್ನು ಕಾಣುತ್ತಾರೆ-ಎಂಬುದೂ ಈ ಯುಗದ ಇತಿಹಾಸದ ಮಥಿತಾರ್ಥ. ಪ್ರಯೋಜನ ಪ್ರಮಾಣವಾದದ ಜೊತೆಗೆ ಒಂದು ಉನ್ನತ ಮಟ್ಟದ ಆಧ್ಯಾತ್ಮಿಕತೆಯೂ ವಿಕಾಸಗೊಂಡಿತು. ಚರಿತ್ರೆಯನ್ನು ಬಹಿರಂಗ ಘಟನೆಗಳ ನಿರೂಪಣೆಯಿಂದ ಮತ್ತೆ ಆಂತರಿಕ ವಿಚಾರಗಳ ನಿರೂಪಣೆಗೆ ತಂದ ಮೊದಲನೆಯ ಇತಿಹಾಸಕಾರ ವಾಲ್ಟೇರ್. ಯುದ್ದಗಳ ವಿವರಗಳನ್ನೊಳಗೊಂಡ ಪುಸ್ತಕಗಳೂ ನಿಬಂಧಗಳು ಅರ್ಥ ವ್ಯವಸ್ಧೆಗಳೂ ಧಾರ್ಮಿಕಾಂಶಗಳೂ ಅವನ ದೃಷ್ಟಿಯಲ್ಲಿ ಕೇವಲ ಕಾಗದಗಳ ಕಟ್ಟು, ಚಾರಿತ್ರಿಕ ನಿಘಂಟು, ಅಗತ್ಯಬಿದ್ದಾಗ ತೆರೆದು ನೋಡಲು ತಕ್ಕ ಕೃತಿಗಳ ಗಂಟು. ನಿಜವಾದ ಇತಿಹಾಸವೇ ಬೇರೆ. ಅದು ಗತಕಾಲದ ಇತಿ-ಹ-ಆಸಗಳ ಪುನರ್ದರ್ಶನ; ಆ ಕಾಲದ ರೀತಿನೀತಿಗಳ ಚಿತ್ರೀಕರಣ. ಪ್ರಮುಖಾಂಶ ಸಂಕಲನ; ಮಾನವನ ಪರಮಸಾಧನೆಯನ್ನು ಇದಮಿತ್ಥಂ ಎಂದು ಬೆರಳಿಟ್ಟು ತೋರಿಸುವ ಪ್ರಯತ್ನ. ಕಿಕ್ಕಿರಿದುಂಬಿದ ಅತಿಮುಖ್ಯ ವಿವರಗಳ ಸಂತೆಯಲ್ಲಿ ಸಿಲುಕಿ ತೊಳಲಾಡುವುದಾಗಲಿ, ಮಾನವನ ವೈಭವ ಸಂಕಟಗಳ ಚಿತ್ರೀಕರಣವಾಗಲಿ ಚರಿತ್ರೆಯ ಕೆಲಸವಲ್ಲ. ಮಾನವನ ಸ್ವಭಾವ. ಕಲೆ, ಕ್ರಿಯಾತ್ಮಕ ಸಾಧನೆಗಳು ಇವನ್ನು ವಿವರಿಸುವುದೇ ಇತಿಹಾಸದ ಕಾರ್ಯಭಾರ. ಈ ಯುಗದ ಇತಿಹಾಸದ ತತ್ತ್ವವೆಂಬುದು ಐತಿಹಾಸಿಕ ಘಟನೆಗಳ ಜೋಮಾಲೆಯಾಗಲಿ, ದಾರ್ಶನಿಕರ ಉಕ್ತಿಸರಗಳಾಗಲಿ ಅಲ್ಲ; ಪ್ರತಿಯಾಗಿ ಅದು ವ್ಯವಸ್ಧೆಗಳ ಇತಿಹಾಸವಾಯಿತು.

	ಇದರಿಂದ ಇತಿಹಾಸ ಹೆಚ್ಚು ಆಳವಾಯಿತು ಮಾತ್ರವಲ್ಲ, ದೇಶಕಾಲಾತ್ಮಕವಾಗಿ ಅದು ವಿಸ್ತರಿಸಿತು. ಇಲ್ಲೂ ವಾಲ್ಟೇರ್ ಬಹು ಸಮರ್ಥವಾಗಿ ತನ್ನ ಯುಗದ ತುಡಿತವನ್ನು ಸೆರೆಹಿಡಿದಿದ್ದಾನೆ. ಅದರೊಂದಿಗೆ ವಿಶ್ವೇಹಾಸದ ಸತ್ ಸಂಪ್ರದಾಯದ ಚಿತ್ರ ಎಷ್ಟು ಸಂಕುಚಿತವೆಂಬುದನ್ನೂ ತೋರಿಸಿದ್ದಾನೆ. ಭಾರತ ಚೀನಗಳು ತಮ್ಮ ಪ್ರಾಚೀನತೆಯಿಂದಲೂ ಉನ್ನತ ನಾಗರಿಕತೆಗಳಿಂದಲೂ ಎಲ್ಲರ ಗಮನ ಸೆಳೆದವು. ಪ್ರಾಚ್ಯಗ್ರಂಥಗಳೂ ಭಾಷಾಂತರಗಳೂ ಇತಿಹಾಸ ಲೇಖನಗಳ ರಾಶಿಯಲ್ಲಿ ಸೇರಿಕೊಂಡುವು. ಪ್ರಾಚ್ಯದ ಬಗೆಗೆ ತಿಳಿವಳಿಕೆಯೂ ಮಧ್ಯಯುಗದ ಪರಿಜ್ಞಾನವೂ ವಿಸ್ತøತವಾದವು. ಸಾಮಗ್ರಿಯ ಸೂಕ್ಷ್ಮ ಪರೀಕ್ಷಣವೂ ದಾಖಲೆಗಳ ಅಧಿಕೃತತೆಯ ನಿಷ್ಕರ್ಷೆಯೂ ಸಾಧ್ಯವಾದವು. ಆಗಿನ ಕಾಲದ ವಾತಾವರಣ, ಸರ್ಕಾರ, ಧರ್ಮ, ಜನರ ಪ್ರತಿಭೆ ಇವುಗಳೆಲ್ಲವೂ ಇತಿಹಾಸದ ಕಾರ್ಯಕಾರಣಸಂಬಂಧಸೃಷ್ಟಿಯಲ್ಲಿ ಸಹಾಯಕವಾದವು.

	ರಮ್ಯತೆ ಮತ್ತು ಇತಿಹಾಸ ಲೇಖನ: ಫ್ರಾನ್ಸಿನ ಮಹಾಕ್ರಾಂತಿಯಾದ ಅನಂತರ ಎರಡು ಬಗೆಯ ಇತಿಹಾಸ ಲೇಖನ ಕಂಡುಬರುತ್ತದೆ. ಪುರಾತನ ವೈಭವದ ಪುನರಾವರ್ತನೆಯ ಹಂಬಲವೊಂದು ಕವಲಾದರೆ, ವೈಚಾರಿಕ ಪಂಥದ ಪುನರುಜ್ಜೀವನ ಇನ್ನೊಂದು ಕವಲು. ಎರಡು ಬಗೆಯ ಇತಿಹಾಸಗಳೂ ಮಧ್ಯಯುಗೀಯ ಲಕ್ಷಣ ತಳೆದುವು. ರಾಷ್ಟ್ರೀಯ ಸಂಪ್ರದಾಯ. ಹಳೆಯ ಮನೆ, ಹಳೆಯ ಕೊತ್ತಲ. ಹಳೆಯ ಆರಾಧನಮಂದಿರ-ಎಲ್ಲವೂ ಆದರ್ಶಪ್ರಾಯವೇ. ಚರಿತ್ರಕಾರರು ಮತ್ತೆ ಹಳೆಯ ಹಾಡನ್ನೇ ಹಾಡಿದರು. ಹಳೆಯ ಕಥೆಗಳ ಕನಸು ಕಂಡರು. ಪುರಾತನ ಪ್ರಿಯತೆಯ ಇತಿಹಾಸ ಲೇಖನ ವಿಧಾನ ಹೆಚ್ಚುಕಡಿಮೆ ಆ ಕಾಲದ ಎಲ್ಲ ಚಿಕ್ಕದೊಡ್ಡ ಬರೆವಣಿಗೆಗಳನ್ನೂ ಹೊಕ್ಕಿತು. ಶುದ್ಧಾಂಗವಾಗಿ ವೈಜ್ಞಾನಿಕ ಚಿಂತನೆಯನ್ನು ಪ್ರತಿನಿಧಿಸಿದ ನೀಬೂರ್‍ನಂಥ ಚರಿತ್ರಕಾರರಲ್ಲೂ ಇದು ಕಂಡಿತು. ಸ್ಪೇನಿನ ಕ್ರೈಸ್ತ ರಾಜರ ಯುದ್ಧ ಮತ್ತು ಗಾಥಿಕ್ ವಾಸ್ತುಶಿಲ್ಪ-ಇವು ಏಕಪ್ರಕಾರವಾದ ಸಾರ್ವತ್ರಿಕ ಹಾಗೂ ರಾಷ್ಟ್ರೀಯ ಅನುಕಂಪೆಯ ವಸ್ತುಗಳಾದುವು. ಮಧ್ಯಯುಗದ ಇತಿವೃತ್ತಗಳ ಅನುವಾದಗಳನ್ನು ಪುನರ್‍ಮುದ್ರಿಸಲಾಯಿತು. ಚಾರಿತ್ರಿಕ ರಮ್ಯಕಾವ್ಯವೆಂಬ ಹೊಸತೊಂದು ಸಾಹಿತ್ಯ ಪ್ರಚಲಿತವಾಯಿತು. ಸರ್ವಾಲ್ಟರ್ ಸ್ಕಾಟ್ ಅದರ ಪ್ರಮುಖ ಪ್ರತಿಪಾದಕ. ಅಮೂರ್ತ ವಿಚಾರವೊಂದೇ ಸಾಲದೆಂಬುದು ಈ ಚರಿತ್ರಲೇಖನದ ವೈಶಿಷ್ಟ್ಯ. ಇದರ ಅತಿರೇಕದ ಮಾದರಿ ಕಾರ್ಲ್ ಮಾಕ್ರ್ಸನಲ್ಲಿ ಕಂಡುಬಂತು; ಸಮಾಜವಾದಿ ಪಂಥಕ್ಕೆ ರಮ್ಯಪಂಥದ ರೂಪು ಬಂತು. ಇನ್ನೂ ಒಂದು ಉದಾಹರಣೆ ಹೆಗೆಲ್. ಚರಿತ್ರೆಗೆ ವೈಜ್ಞಾನಿಕ ಕಲ್ಪನೆಯನ್ನು ಆಧಾರ ಮಾಡದೆ ತನ್ನ ಆದರ್ಶ ತತ್ತ್ವಗಳನ್ನೇ ಆತ ರೂಪಿಸಿದ. ಚರಿತ್ರೆಯನ್ನು ಒಂದು ವಿಕಾಸವೆಂದು ಕಲ್ಪಿಸಿಕೊಳ್ಳುವುದೂ ಅದನ್ನು ಆದರ್ಶಮೌಲ್ಯಗಳ ಚರಿತ್ರೆಯೆಂದು ಭಾವಿಸುವುದೂ ಹೆಗೆಲಿಯನ್ ದೃಷ್ಟಿಕೋನ. ಕ್ಯಾಂಟನ ಅನುಯಾಯಿಗಳ ವ್ಯಕ್ತಿ ನಿಷ್ಠೆಯಿಂದ ಈತ ಚರಿತ್ರೆಯನ್ನು ಚಿಂತನೆಯ ವಸ್ತುನಿಷ್ಠೆಯತ್ತ ಹೊರಡಿಸಿದ. ಈ ಯುಗದಲ್ಲಿ ಇತಿಹಾಸವನ್ನು ಒಮ್ಮೊಮ್ಮೆ ಚಿಂತನೆಯ ಹಂತದಿಂದ ಎತ್ತಿ ಗತಕಾಲದ ಕಾಲ್ಪನಿಕ ಜೀವನಪೀಠದ ಮೇಲೆ ಕೂರಿಸುತ್ತಿದ್ದದ್ದೂ ಉಂಟು.

	ಇತ್ಯಾತ್ಮಕ ಧೋರಣೆಯ ಇತಿಹಾಸ ಲೇಖನ: 19ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಒಂದು ವೈಚಾರಿಕ ಪಂಥ ಹುಟ್ಟಿಕೊಂಡಿತು. ಚರಿತ್ರೆಯ ತತ್ತ್ವದಲ್ಲಿ ಮೂರು ಮುಖ್ಯಾಂಶಗಳಿವೆಯೆಂದು ಅದು ವಿಶ್ಲೇಷಿಸಿತು; ಚಾರಿತ್ರಿಕ ಘಟನೆಗಳ ಸತ್ಯತೆ, ನಿರೂಪಣೆಗೂ ದಾಖಲೆಗೂ ಹೊಂದಾಣಿಕೆ, ಬೆಳವಣಿಗೆಯ ವ್ಯಾಪನೆ. ಚಾರಿತ್ರಿಕ ಘಟನೆಗಳ ಸತ್ಯತೆಯನ್ನೆತ್ತಿ ಹಿಡಿದವರು ತಮ್ಮನ್ನು ಚರಿತ್ರಕಾರರೆಂದು ಕರೆದುಕೊಂಡರು. ಮೂಲದೊಂದಿಗೆ ಹೇಳಿಕೆಯ ಯಥಾರ್ಥತೆಯನ್ನು ಸ್ಥಾಪಿಸಲು ಹೊರಟವರು ತಮ್ಮನ್ನು ಭಾಷಾಶಾಸ್ತ್ರಜ್ಞರೆಂದು ಕರೆದುಕೊಂಡರು. ಪ್ರಕೃತಿಯನ್ನು ವಿವರಿಸಿದವರು ತತ್ತ್ವಶಾಸ್ತ್ರಜ್ಞರೆಂದು ಹೆಸರಾದರು. ಚರಿತ್ರಕಾರರು ವಿಶಿಷ್ಟ ವಿಷಯಗಳನ್ನು ಪರೀಶೀಲಿಸಿದರೇ ವಿನಾ ತತ್ತ್ವ ವಿಚಾರದಲ್ಲಿ ತೊಡಗಲಿಲ್ಲ. ಅವರಿಗೆ ಪ್ರಾಪಂಚಿಕ ವಿಷಯದ ಮೌಲ್ಯಕ್ಕಿಂತ ಯಥಾರ್ಥತೆಯೇ ಮುಖ್ಯವೆನಿಸಿತು. ಜರ್ಮನ್, ಫ್ರೆಂಚ್, ಕೆಥೊಲಿಕ್ ಅಥವಾ ಪ್ರಾಟೆಸ್ಟಂಟ್ ಎಂಬುದಾಗಿ ಚರಿತ್ರೆಗೆ ಬಣ್ಣ ಹಚ್ಚುವುದು ತಪ್ಪು. ಯಾರ ಭಾವನೆಗಳನ್ನೂ ಗಾಸಿಗೊಳಿಸದ ಮಟ್ಟಿಗೆ ಅದು ವಸ್ತುನಿಷ್ಠವಾಗಿರಬೇಕು. ಈ ಪಂಥದ ಚರಿತ್ರಕಾರರಲ್ಲೆಲ್ಲ ಅತ್ಯಂತ ಶ್ರೇಷ್ಠನಾದವನೆಂದರೆ ಲಿಯೊಪೋಲ್ಡ್ ರಾಂಕ. ಅವನು ತತ್ತ್ವಶಾಸ್ತ್ರವನ್ನು, ಅದರಲ್ಲೂ ಹೆಗೆಲಿಯನ್ ಸಿದ್ಧಾಂತವನ್ನು, ಎದುರಿಸಿದ. ಘಟನೆಗಳು ವಾಸ್ತವವಾಗಿ ಹೇಗೆ ಸಂಭವಿಸಿದುವುವೆಂಬುದನ್ನು ತೆರೆದು ತೋರುವುದೇ ಆತನ ಕೆಲಸ; ಹೇಗೆ ಸಂಭವಿಸಬಹುದಾಗಿತ್ತು ಎಂಬುದನ್ನಲ್ಲ. ಫ್ರೆಂಚ್ ಇತಿಹಾಸವನ್ನು ಫ್ರೆಂಚರ ಮನಸ್ಸಿಗೆ ಅಸಂತುಷ್ಟಿಯಾಗದಂತೆ ರಚಿಸಿದ್ದು ಆತನ ಅತ್ಯುನ್ನತ ಸಾಧನೆ. ಎರಡನೆಯ ವಿಚಾರಪಂಥ ಭಾಷಾಶಾಸ್ತ್ರಜ್ಞರದು. ಪಾಂಡಿತ್ಯದ ಇತಿಹಾಸದ ಮೇಲೆ ಇವರು ಗಮನ ಹರಿಸಿದರು. ಆಕರಗಳನ್ನು ವೈಜ್ಞಾನಿಕವಾಗಿ ಸಂಪಾದಿಸಿ, ಅದನ್ನು ವಸ್ತುವಾಗಿ ಉಪಯೋಗಿಸಿಕೊಳ್ಳುವಂತೆ ಚರಿತ್ರಕಾರರಿಗೆ ಒದಗಿಸುವುದು ಅವರ ಕೆಲಸ. ಮೂರನೆಯ ಪಂಥದವರು ತತ್ತ್ವಶಾಸ್ತ್ರಜ್ಞರು ಕರ್ತವ್ಯ ನಿರ್ವಹಿಸಿದರು. ಆದರೆ ಹಾಗೆ ಕರೆಯಿಸಿಕೊಳ್ಳಲು ಇಷ್ಟಪಡದವರು ಇತ್ಯಾತ್ಮಕವಾದಿಗಳೆಂದೋ ನೈಜಸಿದ್ದಾಂತಿಗಳೆಂದೋ ಸಮಾಜಶಾಸ್ತ್ರಜ್ಞರೆಂದೋ ಪ್ರಯೋಗಶೀಲರೆಂದೋ ಶೋಧಕರೆಂದೋ ತಮ್ಮನ್ನು ತಾವು ವಿನಯದಿಂದ ಕರೆದುಕೊಂಡರು. ಚಾರಿತ್ರಿಕ ತತ್ತ್ವಶಾಸ್ತ್ರಜ್ಞರದಕ್ಕಿಂತ ಇವರ ಕೆಲಸ ಭಿನ್ನ. ಇತಿಹಾಸ ದರ್ಶನಶಾಸ್ತ್ರಜ್ಞರಿಗೆ ಗುರಿಯ ಕಲ್ಪನೆಯೇ ಮೂಲ. ಇವರಿಗೆ ಕಾರಣದ ಕಲ್ಪನೆಯೇ ಆಧಾರ. ಪ್ರತಿಯೊಂದು ಘಟನೆಯ ಕಾರಣವನ್ನೂ ಹುಡುಕುವುದು. ಆ ಕಾರಣಸೂತ್ರವನ್ನು ಚರಿತ್ರೆಯ ಗತಿಯ ಮೇಲೆ ಪ್ರಯೋಗಿಸುವುದು-ಇದು ಅವರ ಕೆಲಸ. ಇತರರು ಇತಿಹಾಸ ಚೇತನದ ಮೂಲಾನ್ವೇಷಣೆ ಮಾಡಿದರು. ಆದರೆ ಅವರು ಇತಿಹಾಸದ ಚಲನಸೂತ್ರವನ್ನು, ಸಾಮಾಜಿಕ ಭೌತಶಾಸ್ತ್ರವನ್ನು ಸೃಷ್ಟಿಸಲೆತ್ನಿಸಿದರು. ಇಡೀ ವಿಜ್ಞಾನವೇ ಸಂಗ್ರಹ ಕಾರ್ಯಾಗಾರದ ತತ್ತ್ವದಮೇಲೆ ರೂಪಿತವಾಗಿದ್ದರಿಂದ ಇತಿಹಾಸದ ಸಮರಸ ಚೌಕಟ್ಟಿನಲ್ಲಿ ಕಾರಣಗಳನ್ನೂ ಅವುಗಳಿಂದ ಉದ್ಭವಿಸಿದ ವಿಷಯ ಪ್ರವಾಹವನ್ನೂ ತೋರಿಸುವ ಯತ್ನ ನಡೆಯಿತು. ಇತಿಹಾಸದ ಕಾರಣಪರಂಪರೆಯನ್ನು ನಿರ್ಧರಿಸುವುದರಲ್ಲಿ ಜನಾಂಗ, ವಂಶ, ಅವನತಿ, ಅನುಕರಣೆ, ಪ್ರಭಾವ, ವಾತಾವರಣ ಮುಂತಾದ ಪ್ರಾಕೃತಿಕ ವಿಚಾರಗಳನ್ನೂ ಇತರ ಅಂಶಗಳನ್ನೂ ಪರೀಶೀಲನೆಗೆ ತೆಗೆದುಕೊಳ್ಳಬೇಕು-ಎಂಬುದು ಇವರ ವಿಚಾರ. ಹೀಗೆ ಇತ್ಯಾತ್ಮಕವಾದಿಗಳು ಚರಿತ್ರೆಯನ್ನು ಕಡಿಮೆ ಅಮೂರ್ತವೂ ಸತ್ಯವಿಷಯಭೂಯಿಷ್ಠವೂ ಆಗುವಂತೆ ಮಾಡಿದರು. ಭೌತಿಕವೆನ್ನಬಹುದಾದ ಆಸಕ್ತಿಗಳನ್ನೂ ಕ್ರತುಶಕ್ತಿಯೆನಿಸಬಹುದಾದ ಹಿಂಸೆ ಬಲಗಳನ್ನೂ ಸ್ವಾಭಾವಿಕವೆನ್ನಬಹುದಾದ ವಿನ್ಯಾಸಗಳನ್ನೂ ರೋಗನಿಧಾನಗಳೆನಿಸಬಹುದಾದ ಪ್ರಕ್ರಿಯೆಗಳನ್ನೂ ಮಾನಸಿಕ ಶ್ರಮಗಳೆನ್ನಬಹುದಾದ ಆಧ್ಯಾತ್ಮಿಕ ಸಂಕೀರ್ಣತೆಗಳನ್ನೂ ಒಳಗೊಳ್ಳುವಂತೆ ಮಾಡಿದರು. ಭಿನ್ನತೆಯೂ ಐತಿಹಾಸಿಕ ವಿವಿಧತೆಯೂ ಅಸ್ತಿತ್ವಕ್ಕೆ ಬಂದದ್ದು ಹೇಗೆಂಬುದನ್ನು ಕಂಡುಹಿಡಿಯಲು ಈ ಇತ್ಯಾತ್ಮಕವಾದಿಗಳು ಪ್ರಯತ್ನಿಸಿದರು.

	ಭಾರತೀಯ ಇತಿಹಾಸ ಲೇಖನ: ಕ್ರಿ.ಶ. 1000ದ ವರೆಗೆ ಭಾರತದಲ್ಲಿ ಇತಿಹಾಸ ಲೇಖನದ ಅಭಾವ ಕಂಡುಬರುತ್ತದೆ. ಇದು ಆಶ್ಚರ್ಯವೇ ಸರಿ. ಇತಿಹಾಸ ಲೇಖನವೆಂದು ಹೇಳಬಹುದಾದ ಕೃತಿಗಳು ದೊರತಿರುವುದು ಎರಡೇ ಎರಡು. ಒಂದು, ರಾಜ ತರಂಗಿಣಿ. ಕಲ್ಹಣ ವಿರಚಿತ ಕಾಶ್ಮೀರ ರಾಜವಂಶಾವಳಿ. ಇನ್ನೊಂದು ಮಹಾವಂಶ ಎಂಬ ಹೆಸರಿನ ಸಿಲೋನಿನ ರಾಜವಂಶಾವಳಿಯ ಕೃತಿ. ಇತಿಹಾಸ ಕೃತಿಗಳು ನಾಶವಾಗಿವೆ ಎಂದು ಭಾವಿಸಲು ಕಾರಣಗಳು ಏನೂ ಇಲ್ಲ. ಚಾರಿತ್ರಿಕವಾದ ಚಾರಿತ್ರಿಕ ಸಾಹಿತ್ಯ ಇಲ್ಲದೆ ಹೋದರೂ ನಾವು ಪ್ರಾಚೀನ ಭಾರತದ ಚರಿತ್ರೆಯನ್ನು ಪುನರ್ ನಿರ್ಮಿಸಬಹುದು. ಪುರಾಣ ಎಂದು ಕರೆಯುವ ಸಾಹಿತ್ಯ, ಇತಿಹಾಸವೆಂಬ ಭಾಗವನ್ನು ಒಳಗೊಂಡಿದೆ. ರಾಜರ ಪಟ್ಟಿಗಳನ್ನು ಸಂಪ್ರದಾಯಗಳನ್ನೂ ಸಂಸ್ಧೆಗಳನ್ನೂ ಕುರಿತ ಸಮಗ್ರ ಉಲ್ಲೇಖಗಳನ್ನೊದಗಿಸುವುದೇ ಇದರ ಮುಖ್ಯ ಉದ್ದೇಶ. ಈ ಆಧಾರದಿಂದ ನಾವು ಆ ಕಾಲದ ಇತಿಹಾಸವನ್ನು ರಚಿಸಬಹುದು. ಕಾಲಚಕ್ರದೊಂದಿಗೆ ವಿಶ್ವವೂ ಪರಿವರ್ತನೆ ಹೊಂದುತ್ತದೆ ಎಂಬ ಮೂಲಭೂತವಾದ ಕಲ್ಪನೆಯೇ ಈ ಬರವಣಿಗೆಗಳಿಗೆ ಆಧಾರ. ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಇತಿಹಾಸದ ಅತ್ಯುನ್ನತ ಪಾಠವಾಗುತ್ತದೆ. ಶಾಂತರಸವನ್ನು ಇವು ಬೋಧಿಸುತ್ತವೆ. ಹೀಗೆ ಯಹೂದ್ಯರ, ಕ್ರೈಸ್ತರ ಮತ್ತು ಮುಸ್ಲಿಮರ ಧರ್ಮಗಳಲ್ಲಿ ಇಲ್ಲದ ಬೇರೆ ಬಗೆಯ ಚಾರಿತ್ರಿಕ ಪ್ರಜ್ಞೆಯನ್ನು ಭಾರತೀಯ ಚಿಂತನೆ ಬೋಧಿಸುತ್ತದೆ. ಬೌದ್ಧ ಪರಂಪರೆಯ ಸಾಹಿತ್ಯ ಪುರಾಣಸಾಹಿತ್ಯಕ್ಕಿಂತಲೂ ಹೆಚ್ಚು ನಂಬಿಕೆಗೆ ಅರ್ಹ, ಕ್ರಿಸ್ತಶಕದ ಆರಂಭದ ವೇಳೆಗೆ ಚಾರಿತ್ರಿಕ ಪ್ರಜ್ಞೆಯಲ್ಲಿ ಒಂದು ಮಹತ್ತ್ವಪೂರ್ಣ ಬದಲಾವಣೆ ಕಂಡುಬರುತ್ತದೆ. ಅದು ಕಾವ್ಯರಚನೆ. ಪ್ರಾಚೀನ ಇತಿಹಾಸ ಪರಂಪರೆಯನ್ನು ಇಲ್ಲಿ ಮತ್ತೆ ರಚಿಸಿ ವ್ಯಾಖ್ಯಾನಿಸಲಾಯಿತು. ಈ ಕ್ರಿಯೆಯಲ್ಲಿ ಚಾರಿತ್ರಿಕ ಸತ್ಯ ನಿಧಾನವಾಗಿ ಸೌಂದರ್ಯಶಾಸ್ತ್ರದಲ್ಲಿ ಕರಗಿಹೋಗುತ್ತದೆ. ಈ ಕಾಲದಲ್ಲಿ ಚರಿತ್ರೆಯೂ ಕಥೆಯಾಗುತ್ತದೆ. ಈ ಪ್ರಕ್ರಿಯೆ ಕ್ರಿಸ್ತಶಕ ಮೊದಲನೆಯ ಸಹಸ್ರಮಾನದುದ್ದಕ್ಕೂ ಮುಂದುವರಿಯಿತು. ಪರಿಣಾಮವಾಗಿ ಕ್ರಿ.ಶ. ಎರಡನೆಯ ಶತಮಾನಕ್ಕಿಂತ ಹಿಂದಿನ ಪ್ರಾಕೃತ ಶಾಸನಗಳಲ್ಲಿ ಕಂಡುಬರುವ ಚಾರಿತ್ರಿಕ ವಿವರಗಳು ಮುಂದಿನ ಸಂಸ್ಕøತ ಶಾಸನಗಳಿಗಿಂತಲೂ ಹೆಚ್ಚು ಕರಾರುವಾಕ್ಕಾದವು. ಒಂದೇ ಘಟನೆಯ ಮೊದಲಿನ ಹಾಗೂ ಅನಂತರದ ನಿರೂಪಣೆಗಳೆರಡೂ ಇರುವ ಪಾಲಿ ಸಾಹಿತ್ಯದಲ್ಲಾದರೂ, ಮೊದಲಿನದು ಹೆಚ್ಚು ಖಚಿತ. ಸಮಕಾಲೀನ ದಾಖಲೆಗಳನ್ನು ಕಲಾತ್ಮಕವಾಗಿ ಪರಿವರ್ತಿಸಿದುದರಿಂದ ಚರಿತ್ರೆ ಕಥೆಯಾಗಿ ಮಾರ್ಪಟ್ಟಿತು. ಸಂಪ್ರದಾಯವನ್ನು ಮುರಿದು ಶುದ್ಧ ಚಾರಿತ್ರಿಕ ತತ್ತ್ವಗಳ ಮೇಲೆ ಬರೆದ ಕೀರ್ತಿ ಕಲ್ಹಣನಿಗೆ ಸಲ್ಲಬೇಕು. ಅವನು ಹನ್ನೆರಡನೆಯ ಶತಮಾನದ ಚರಿತ್ರಕವಿಯಾಗಿ ತನ್ನ ತಂದೆ ಮತ್ತು ಸಹ ಆಸ್ಧಾನಿಕರಿಂದ ಏನೆಲ್ಲವನ್ನು ಪಡೆಯಬಹುದೋ ಅದೆಲ್ಲವನ್ನೂ ಇಟ್ಟುಕೊಂಡು ಸಮಗ್ರವಾಗಿ ತನ್ನ ಕೃತಿಯನ್ನು ನಿರೂಪಿಸಿದ. ಭಾರತದಲ್ಲಿ ನಿಜವಾಗಿಯೂ ಬಹಳ ಅಪರೂಪವಾದ ವಿಮರ್ಶನ ಪ್ರಜ್ಞೆಯಿಂದ ಅವನು ತನ್ನ ವಿಸ್ತಾರವಾದ ರಾಜಕೀಯ ಕೃತಿಯನ್ನು ರಚನೆ ಮಾಡಿದ್ದಾನೆ. ಅವನ ನಿರೂಪಣೆ ಧರ್ಮಶೀಲ ನಿರಂಕುಶತೆಯ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಊಳಿಗ ಮಾನ್ಯ ಮನೆತನಗಳ ತಿಕ್ಕಾಟದ ದುಷ್ಪಲಗಳಿಗೆ ಪರಿಹಾರವಾದ ಧರ್ಮಾತ್ಮನ ದೊರೆತನದ ಹಿರಿಮೆಯ ಬಣ್ಣನೆಯನ್ನು ಆತನ ಕೃತಿಯಲ್ಲಿ ಕಾಣಬಹುದು. ಈ ಪ್ರಪಂಚಕ್ಕೆ ಬಲು ಮುಪ್ಪು; ಇದಕ್ಕೀಗ ಅವನತಿಯ ದಶೆ. ಈ ಪ್ರಪಂಚದಲ್ಲಿ ಎಲ್ಲವೂ ನಶ್ವರ, ಮಾನವನನ್ನು ರೂಪಿಸುವಲ್ಲಿ ದೈವೀಶಕ್ತಿಗಳ ಪ್ರಭಾವ ಬಹಳ, ವೈರಾಗ್ಯಭಾವವನ್ನೊಪ್ಪಿ ಅದನ್ನು ಪೋಷಿಸಿಕೊಳ್ಳುವುದೇ ಮಾನವನಿಗೆ ವಿಹಿತಮಾರ್ಗ. ಇದು ಈ ಸನಾತನಿ ಸಂಪ್ರದಾಯವಂತ ಬ್ರಾಹ್ಮಣ ಲೇಖಕನ ಕೃತಿಯ ಅಂತಃಸೂತ್ರ. ಇತಿಹಾಸ ವಿಚಾರದಲ್ಲಿ ಕಲ್ಹಣದ ದೃಷ್ಟಿ ಮಧ್ಯಯುಗದ ಹಿಂದೂಭಾರತದಲ್ಲಿ ಅನೇಕರು ಬಹುಶಃ ಒಪ್ಪುವಂಥದಾಗಿತ್ತು.

	ಭಾರತಕ್ಕೆ ಮುಸ್ಲಿಮರು ಬಂದಾಗ ಅವರು ತೀವ್ರತರ ಚಾರಿತ್ರಿಕ ಪ್ರಜ್ಞೆಯನ್ನು ತಮ್ಮೊಂದಿಗೆ ತಂದರು. ಅರಬ್ಬೀ, ತುರ್ಕಿ ಹಾಗೂ ಪಾರಸೀ ಮೂಲಗಳಿಂದ ನವೋನವವಾಗುತ್ತಿದ್ದ ಸೂಕ್ಷ್ಮ ಇತಿಹಾಸಪ್ರಜ್ಞೆ ಅವರಲ್ಲಿತ್ತು. ಭಾರತದಲ್ಲಿ ಸುಲ್ತಾನರ ಯುಗದ ಮುಸಲ್ಮಾನ ಚರಿತ್ರಕಾರರು ದೈವೀ ಸ್ಪೂರ್ತವಾದ ಕುರಾನಿನಲ್ಲಿ ಮಾತ್ರವೇ ನಿಜವಾದ ಧರ್ಮವನ್ನು ಕಾಣಲು ಸಾಧ್ಯವೆಂಬ ನಂಬಿಕೆಯಿಂದ ಬರೆದರು. ಮುಸ್ಲಿಮರ ಆದರ್ಶ ಇತಿಹಾಸವನ್ನು ಸ್ವರ್ಗದಲ್ಲಿಡಲಾಗಿದೆಯೆಂದೂ, ಇದಕ್ಕೆ ದೃಷ್ಟಾಂತಗಳನ್ನು ಜೋಡಿಸುವುದೇ ತಮ್ಮ ಮೂಲಭೂತ ಕರ್ತವ್ಯವೆಂದೂ ಈ ಕಾರ್ಯ ಮಾಡುವಲ್ಲಿ ತಮ್ಮ ಆಕರಗಳನ್ನು ಉದ್ದರಿಸಬಹುದಲ್ಲದೆ ಅದನ್ನು ಪ್ರಶ್ನಿಸುವುದಾಗಲಿ ವ್ಯಾಖ್ಯಾನಿಸುವುದಾಗಲಿ ಉಚಿತವಲ್ಲವೆಂದೂ ಅದೊಂದು ಘಟನೆಗಳ ಸರಣಿಯೆಂಬಂತೆ. ಅನೇಕ ವೇಳೆ ಬಿಡಿಬಿಡಿಯಾಗಿ ಒಂದೊಂದಕ್ಕೆ ಸ್ಪಷ್ಟವಾಗಿ ಸಂಬಂಧವಿಲ್ಲವೆಂಬಂತೆ ಕಲ್ಪಿಸಿಕೊಂಡರು. ಇವಕ್ಕೆ ದೇವರೇ ಅರ್ಥ ಕೊಟ್ಟಿದ್ದಾನೆ. ಅವರ ಇತಿಹಾಸದೃಷ್ಟಿ ನಿಯತವೂ ಖಚಿತವೂ ಆದದ್ದು. ಕಾಲಾನುಕ್ರಮಣಿಕೆಯ ಪ್ರಜ್ಞೆಯಂತೂ ತುಂಬ ಕರಾರುವಾಕ್ಕಾದದ್ದು. ಭಾರತದ ಮುಸ್ಲಿಂ ಇತಿಹಾಸ ಲೇಖನದಲ್ಲಿ ಹಿಂದೂಗಳು ಮತ್ತು ಬೌದ್ಧರಲ್ಲಿ ಕಾಣುವಂಥ ಇತಿಹಾಸದ ಪರಿವರ್ತನೆಯ ದೃಷ್ಟಿಯನ್ನು ಮಾತ್ರವಲ್ಲದೆ ಅನೇಕ ಮುಖ್ಯ ಬರಹಗಾರರ ವೈಯಕ್ತಿಕ ಕಾಣಿಕೆಗಳನ್ನೂ ಕಾಣಬಹುದು.

	ಭಾರತದ ಅನೇಕ ಮುಸ್ಲಿಂ ಚರಿತ್ರಕಾರರು ಆಸ್ಧಾನಿಕರಾಗಿದ್ದರು ಅಥವಾ ತಮ್ಮ ಅರಸನ ಆಜ್ಞಾನುಸಾರವಾಗಿಯೋ ಅವರ ಆಶ್ರಯವನ್ನು ಗಳಿಸಲೆಂದೋ ಲೇಖನಕಾರ್ಯದಲ್ಲಿ ತೊಡಗುತ್ತಿದ್ದ ಅಧಿಕಾರಿಗಳಾಗಿದ್ದರು. ಒಳ್ಳೆಯ ಮುಸ್ಲಿಮರಿಗೆ ತಕ್ಕದಾದ ರೀತಿಯಲ್ಲಿ ನಡೆಯಬೇಕೆಂಬುದು ಅವರ ಬೋಧನೆಯ ಉದ್ದೇಶ. ತಮ್ಮ ಅರಸರು ದೈವೀ ಉದ್ದೇಶದ ವಾಹಕರೆಂದೂ ಸಂಕೇತಗಳೆಂದೂ ಅವರು ಚಿತ್ರಿಸಿದರು. ಅರಸರ ಸತ್ಕಾರ್ಯಗಳನ್ನೂ ದುಷ್ಕಾರ್ಯಗಳನ್ನೂ ನಮೂದಿಸಿ ಒಳ್ಳೆಯದನ್ನು ಪ್ರೋತ್ಸಾಹಿಸಿ, ಕೆಟ್ಟದ್ದಕ್ಕೆ ಎಚ್ಚರಿಕೆ ನೀಡುವುದು ಅವರ ಉದ್ದೇಶ. ನಿಜಾóಂ ಉದ್ದೀನ್ ಅಹಮದ್, ಅಬ್ದುಲ್ ಖಾದಿರ್ ಬಡೋನಿ. ಫೆರಿಷ್ಟ ಮುಂತಾದವರು ಸಾಮಾನ್ಯ ಚರಿತ್ರೆಗಳನ್ನು ರಚಿಸಿದರು. ಕಾಲಕ್ರಮದಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಚರಿತ್ರೆಗಳೂ ಕಾಣಿಸಿಕೊಂಡುವು. ಹೊರಗಿನ ಮುಸ್ಲಿಂ ಪ್ರದೇಶಗಳೊಂದಿಗೆ ಸಂಪರ್ಕ ಕಡಿದುಕೊಂಡ ಅಕ್ಬರನ ಉದ್ದೇಶಪೂರ್ವ ನೀತಿಯಿಂದ ಇದಕ್ಕೆ ಪ್ರೋತ್ಸಾಹ ದೊರಕಿತು. ಭಾರತದಲ್ಲಿ ಮೊಗಲ್ ಯುಗವನ್ನು ಅಧಿಕೃತ ಚರಿತ್ರೆಗಳ ಯುಗವೆನ್ನಬಹುದು. ಆಡಳಿತ, ಸೈನ್ಯ ಹಾಗೂ ಭೌಗೋಳಿಕ ಅಂಶಗಳ ಮೇಲೆ ಬೆಳಕು ಬೀರಲು ಮೊಗಲ್ ಅಧಿಕಾರಿಗಳು ಅಸಂಖ್ಯಾತ ದಾಖಲೆಗಳನ್ನು ಉಪಯೋಗಿಸಿಕೊಂಡರು. ಮೊಗಲ್ ಚರಿತ್ರಕಾರರು ವ್ಯಕ್ತಿಗಳ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ತೋರಿಸಲಾರಂಭಿಸಿದರು. ಜೀವನಚರಿತ್ರೆಗಳೂ ಅಧಿಕೃತ ಪತ್ರ ವ್ಯವಹಾರಗಳ ಸಂಗ್ರಹಗಳೂ ಕಾಣಿಸಿಕೊಂಡುವು. ಇವು ಮೊಗಲ್ ಆಸ್ಥಾನಗಳಲ್ಲಿನ ಧಾರಾಳ ದೃಷ್ಟಿಯನ್ನು ವ್ಯಕ್ತಪಡಿಸುತ್ತವೆ. ಐನ್-ಎ-ಅಕ್ಬರಿಯಂಥ ಕೃತಿಗಳ ಆ ಕಾಲಕ್ಕೆ ಸಂಬಂಧಿಸಿದ ವಿಷಯದ ಗಣಿ.

	ಭಾರತಕ್ಕೆ ಐರೋಪ್ಯರು ಬಂದಾಗ ಮೊದಲು ಅವರು ಚರಿತ್ರೆಯನ್ನು ಮತಧರ್ಮಶಾಸ್ತ್ರದ ಒಂದು ಮುಖವೆಂದೇ ಪರಿಗಣಿಸಿದರು. ಕಡಲ ಬಳಿಯ ಏಷ್ಯ ಪ್ರದೇಶದ ಆವಿಷ್ಕಾರ, ಪರಿಶೋಧನೆ ಹಾಗೂ ಆಕ್ರಮಣಗಳಿಂದ ಅವರ ಬರೆಹಗಳ ಸ್ವರೂಪವೇ ಪರಿವರ್ತನೆ ಹೊಂದಿತು. ಮತದ ಧರ್ಮಶಾಸ್ತ್ರದ ಅಂಶ ಹೋಗಿ ರಾಜಕೀಯ ಉದ್ದೇಶ ಪ್ರಬಲವಾಯಿತು. ಸ್ಥಳಗಳ ಮತ್ತು ಜನರ ವರ್ಣನೆಯಿಂದ ಅವರು ತೃಪ್ತರಾಗಲಿಲ್ಲ. ರಾಜಕೀಯವಾಗಿ ಮಹತ್ತ್ವವುಳ್ಳ ಕೃತಿಗಳನ್ನು ಪ್ರಕಟಿಸಿ ಸರ್ಕಾರದ ಧ್ಯೇಯಧೋರಣೆಗಳ ಮೇಲೆ ಪ್ರಭಾವ ಬೀರತೊಡಗಿದರು. ಇದು ಚಿಂತನೆಯ ಅನೇಕ ಪಂಥಗಳ ಉಗಮಕ್ಕೆ ಕಾರಣವಾಯಿತು. ಅವುಗಳಲ್ಲಿ ಜೇಮ್ಸ್ ಮಿಲ್ಲನದೊಂದು ಪಂಥ. ಆತ ಭಾರತಕ್ಕೆ ಒಂದು ಫಲವಾದಿ ಸಿದ್ಧಾಂತವನ್ನು ಅನ್ವಯಿಸಲು ಪ್ರಯತ್ನಿಸಿದ. ಜಾತೀಯತೆ, ಹಕ್ಕು, ಅವಿಚಾರಾಭಿಪ್ರಾಯ ಮುಂತಾದವುಗಳು ಭಾರತವನ್ನಾವರಿಸಿವೆ. ಪ್ರಬುದ್ಧ ನಿರಂಕುಶಾಡಳಿತದಿಂದ ಮಾತ್ರವೇ ಅದನ್ನು ಸುಧಾರಿಸಬಹುದು ಎಂಬುದು ಅವನ ದೃಷ್ಟಿ. ಕಾನೂನು ಮತ್ತು ಸರ್ಕಾರಗಳ ಪ್ರಾಮುಖ್ಯವನ್ನು ಕುರಿತು ಅವನು ಬರೆದ. ಸರ್ ವಿಲಿಯಂ ಜೋನ್ಸ್, ಕನಿಂಗ್‍ಹ್ಯಾಂ. ವಿಲ್ಕಿನ್ಸ್, ಮನ್ರೊ, ಮ್ಯಾಲ್ಕೋಂ ಮತ್ತು ಎಲ್ಫಿನ್ ಸ್ಟೈನ್ ಎಂಬುವರದು ಇನ್ನೊಂದು ಪಂಥ. ಭಾರತೀಯ ಸಮಾಜದ ಬಗ್ಗೆ ಇವರ ಧೋರಣೆ ಸ್ವಲ್ಪ ವಾಸಿ. ಭಾರತೀಯ ಸಂಸ್ಧೆಗಳನ್ನು ಚೆನ್ನಾಗಿ ಅರಿತು ಅದರ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಧಿತಿಗಳನ್ನು ಸಹಾನುಭೂತಿಯಿಂದ ಚಿತ್ರಿಸಲು ಇವರು ಯತ್ನಿಸಿದರು. ಷೋರ್, ಗ್ರಾಂಟ್ ಮುಂತಾದ ಕ್ರೈಸ್ತ ಭಕ್ತಿವಾದಿಗಳದು ಇನ್ನೊಂದು ಪಂಥ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ದೈವನಿಯೋಜಿತ. ಇದು ಪತಿತ ಜನಾಂಗವೊಂದರ ಉದ್ಧಾರಕ್ಕಾಗಿ ಮೊದಲೇ ನಿಯುಕ್ತವಾದ ಯೋಜನೆ ಎಂಬುದನ್ನು ಇವರು ಪಾದ್ರಿಗಳ ನೆರವಿನಿಂದ ವಾದಿಸಿದರು. ಕ್ರೈಸ್ತಧರ್ಮ ಪ್ರಸಾರದಿಂದಲೂ ಬೋಧನೆಯಿಂದಲೂ ತಮ್ಮ ಉದ್ದೇಶ ಸಾಧಿಸತೊಡಗಿದರು. ಆಲ್ಫ್ರೆಡ್ ಲೈಯಾಲ್, ಹೆನ್ರಿ ಮೇನ್, ವಿಲಿಯಂ ಹಂಟರ್ ಮುಂತಾದ ವಿದ್ವಾಂಸರದು ನಾಲ್ಕನೆಯ ಪಂಥ, ಪಾಶ್ಚಾತ್ಯ ಹಾಗೂ ಪ್ರಾಚ್ಯ ಶಕ್ತಿಗಳು ಪರಸ್ಪರ ಸಂಧಿಸಿದ್ದರ ಫಲವೇ ಬ್ರಿಟಿಷ್ ಆಡಳಿತವೆಂದು ಇವರ ಭಾವನೆ. ಭಾರತೀಯ ಆಡಳಿತ ಮತ್ತು ಸಮಾಜದ ವಿಷಯದಲ್ಲಿ ಇವರಿಗೆ ತೀವ್ರ ಆಸಕ್ತಿ. ಪಿ. ಇ. ರಾಬಟ್ರ್ಸ್, ಟಿ.ಜಿ.ಪಿ. ಸ್ಪಿಯರ್, ಸಿ. ಎಚ್. ಫಿಲಿಪ್ಸ್, ಹಾಲ್ಡನ್ ಫರ್ಬರ್ ಮತ್ತು ಬಾಲ್‍ಹ್ಯಾಚೆಟ್ ಮುಂತಾದ ಆಧುನಿಕ ವಿದ್ವಾಂಸರದು ಐದನೆಯ ಪಂಥ. ಆಧುನಿಕ ವಿಮರ್ಶಜ್ಞಾನದ ನೆರವಿನಿಂದ ಇತಿಹಾಸದ ರಚನೆ ಮಾಡಲು ಪಂಥ. ಆಧುನಿಕ ವಿಮರ್ಶಜ್ಞಾನದ ನೆರವಿನಿಂದ ಇತಿಹಾಸದ ರಚನೆ ಮಾಡಲು ಇವರು ಯತ್ನಿಸಿದರು. ಈ ದೃಷ್ಟಿಗಳು ಆಧುನಿಕ ಭಾರತೀಯ ವಿದ್ವಾಂಸರನ್ನು ಬೆರಗುಗೊಳಿಸುತ್ತವೆ. ಏಕೆಂದರೆ ಮೊದಮೊದಲು ಅವರಿಗೆ ಚರಿತ್ರೆಯ ಸಂಪ್ರದಾಯ ಯಾವುದೂ ಇಲ್ಲದಿದ್ದ ಫಲವಾಗಿ ಬ್ರಿಟಿಷರ ಹೆಜ್ಜೆಯನ್ನೇ ಅನುಸರಿಸಿ ನಡೆದರು. ಆದರೆ ಈಸ್ಟ್ ಇಂಡಿಯ ಕಂಪನಿಯ ಅಥವಾ ಅದರ ಉತ್ತರಾಧಿಕಾರಿಯಾದ ಬ್ರಿಟಿಷ್ ಚಕ್ರಾಧಿಪತ್ಯದ ಚಟುವಟಿಕೆಗಳೇ ಬ್ರಿಟಿಷರ ಕಾಲದ ಭಾರತದ ನಿಜವಾದ ಚರಿತ್ರೆಯಲ್ಲವೆಂಬುದನ್ನು ಅವರು ಬಲು ಬೇಗ ಕಂಡುಕೊಂಡರು. ಪರಿಸ್ಥಿತಿಯ ಕರೆಗೆ ಓಗೊಟ್ಟು, ಸುಸಂಘಟಿತರಾಗಿ ಆಡಳಿತದಲ್ಲಿ ಸಮಪಾಲು ಬೇಕೆಂದು ಕೇಳಿ, ತಲೆ ತಲಾಂತರದಿಂದ ಬಂದ ದುಷ್ಟ ಪದ್ಧತಿಗಳನ್ನೆಲ್ಲ ತೊರೆದು, ಬ್ರಿಟಿಷ್ ಸಾಮ್ರಾಜ್ಯವಾದಿಗಳು ಯುದ್ಧದಲ್ಲಿ ವಿಜಯಿಗಳಾಗಿದ್ದಾಗಲೇ ಸೋಲೊಪ್ಪಿ ಭಾರತೀಯರ ಕೈಗೆ ಅಧಿಕಾರ ಕೊಡುವಂತೆ ಮಾಡುವ ಕಲೆಯನ್ನು ಕಲಿತ ಭಾರತೀಯರ ಚಟುವಟಿಕೆಗಳೇ ಚರಿತ್ರೆಯೆಂಬುದನ್ನು ಇವರು ಅರಿತರು. ಭಾರತೀಯರ ಸ್ವಪ್ರಯತ್ನದಿಂದಲೇ ಸಂಭವಿಸುತ್ತಿರುವ ಭಾರತೀಯ ಸಮಾಜದ ಪರಿವರ್ತನೆಯೇ ಭಾರತದ ಇತಿಹಾಸದ ಸತ್ತ್ವವೆಂಬ ಈ ದೃಷ್ಟಿಯ ಪ್ರತಿಪಾದಕರೆಂದರೆ ಸರ್ದಾರ್ ಕೆ. ಎಂ. ಪಣಿಕ್ಕರ್ ಮುಂತಾದ ಈಚಿನ ರಾಷ್ಟ್ರೀಯ ಇತಿಹಾಸಕಾರರು. ಆದರೆ ಅದಕ್ಕೆ ಮೊದಲು ಭಾರತೀಯ ವಿದ್ವಾಂಸರು ಈ ಸಮಸ್ಯೆಗೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿದರು. ನಾರಾಯಣ ಬೋಸ್, ಚಂದ್ರನಾಥ ಬಸು, ಬಂಕಿಮ ಚಂದ್ರನಾಥ ಚಟರ್ಜಿ, ಎ. ಸಿ. ದಾಸ್, ಕೆ. ಪಿ. ಜಯಸ್ವಾಲ್, ಬಿ.ಜಿ. ತಿಲಕ್, ವಿ.ಡಿ. ಸಾವರಕರ್ ಮತ್ತಿತರರು ಪಾಶ್ಚಾತ್ಯ ಸಂಸ್ಕøತಿಗಿಂತ ಹಿಂದೂ ಸಂಸ್ಕøತಿ ಹಿರಿದಾದದ್ದೆಂದು ವಾದಿಸಿದರು. ಇವರದೊಂದು ವಿಚಾರಶೀಲ ಪಂಥ, ರಾಜೇಂದ್ರಲಾಲ್ ಮಿತ್ರ. ಆರ್.ಸಿ. ದತ್ ಮತ್ತು ಆರ್.ಜಿ. ಭಂಡಾರಕರ್ ಇವರು ರಾಷ್ಟ್ರೀಯ ಭಾವನೆಯಲ್ಲಿ ತನ್ಮಯರಾಗದೆ ಘಟನೆಗಳನ್ನು ವಸ್ತುನಿಷ್ಠೆಯಿಂದ ನೋಡಿ ಭಾರತೀಯ ಇತಿಹಾಸಕ್ಕೆ ಐರೋಪ್ಯರಿಂದ ಸಂಭವಿಸಿದ ನಿರೂಪಣೆಗಳನ್ನು ಸರಿಪಡಿಸಲೆತ್ನಿಸಿದರು. ಮೂರನೆಯ ಪಂಥಕ್ಕೆ ಸೇರಿದವರು ಮೇಜರ್ ಡಿ. ಬಸು, ಎಸ್. ಮಜುಂದಾರ್, ಸಿ. ವೈ. ಚಿಂತಾಮಣಿ ಮತ್ತು ಸತೀಂದ್ರನಾಥ ಬ್ಯಾನರ್ಜಿ. ಬ್ರಿಟಿಷರು ಭಾರತದಲ್ಲಿ ಮಾಡಿದ ಆರ್ಥಿಕ ಸುಲಿಗೆಯನ್ನಿವರು ಬಯಲಿಗೆಳೆದರು. ಬ್ರಿಟಿಷರು ಆಳ್ವಿಕೆಯನ್ನು ಆದಷ್ಟು ಬೇಗ ಕೊನೆಗೊಳಿಸುವುದು ಸಾಧ್ಯವಾಗುವಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿನೀಡುವುದು ಇವರ ಉದ್ದೇಶ. ಹಿರೇನ್ ಮುಖರ್ಜಿ, ಆರ್. ಪಾಮ್ಮೆದತ್, ಕೋಸಾಂಬಿ ಮುಂತಾದವರದು ನಾಲ್ಕನೆಯ ಪಂಥ. ಮಾಕ್ರ್ಸನ ಚಿಂತನೆಯಿಂದ ಪ್ರಭಾವಿತರಾಗಿದ್ದ ಇವರು ಆ ವಿಶಿಷ್ಟ ನಿಲುವಿನಿಂದ ವಿಶ್ಲೇಷಣೆ ಮಾಡಲು ಯತ್ನಿಸಿದರು. ಚಂದ್ರನಾಥ ಸರ್ಕಾರ್, ಎಸ್. ಎನ್. ಸೇನ್, ಷಫತ್ ಅಹಮದ್‍ಖಾನ್, ಡಾ. ಎಸ್. ಕೃಷ್ಣಸ್ವಾಮಯ್ಯಂಗಾರ್, ಶ್ರೀನಿವಾಸಾಚಾರಿಯರ್ ಮುಂತಾದವರು ಯಾವ ಪಂಥದಿಂದಲೂ ಆಕರ್ಷಿತರಾಗಲಿಲ್ಲ. ಭೂತಕಾಲವನ್ನು ವಾಸ್ತವಿಕವಾಗಿ ಪುನಾರಚಿಸುವುದು ಇವರ ಪ್ರಯತ್ನ.

	ಕಳೆದ ಅರ್ಧ ಶತಮಾನದಲ್ಲಿ ಅನೇಕ ಚರಿತ್ರಕಾರರು ಭಾರತದ ಚರಿತ್ರೆಯನ್ನು ತಮ್ಮ ತಾಯಿನುಡಿಗಳಲ್ಲೂ ಇಂಗ್ಲಿಷಿನಲ್ಲೂ ಬರೆದಿದ್ದಾರೆ. ಪ್ರೂಫೆಸರ್ ಆರ್.ಸಿ. ಮಜುಂದಾರ್, ಎಸ್.ಎನ್.ಸೇನ್ ಮುಂತಾದ ಸುಪ್ರಸಿದ್ಧ ವಿದ್ವಾಂಸರು ಎರಡು ಭಾಷೆಗಳಲ್ಲೂ ಧಾರಾಳವಾಗಿ ಬರೆದಿದ್ದಾರೆ. ಅಥವಾ ಮೊದಲು ಇಂಗ್ಲಿಷಿನಲ್ಲಿ ಬರೆದು ಆಮೇಲೆ ಅವು ತಮ್ಮ ತಾಯಿನುಡಿಗೆ ಅನುವಾದವಾಗುವಂತೆ ಮಾಡಿದ್ದಾರೆ. ಆಧುನಿಕವೂ ಸ್ವೀಕೃತವೂ ಆದ ಚಾರಿತ್ರಿಕ ಭಾವನೆಗಳನ್ನು ತಂತ್ರಗಳನ್ನೂ ಅವರು ಬಳಸಿದ್ದಾರೆ. ಆದ್ದರಿಂದ ಅವರ ಇಂಗ್ಲಿಷ್ ಕೃತಿಗಳಿಗೂ ಮಾತೃಭಾಷೆಯ ಕೃತಿಗಳಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ.

	ದೇಶೀಯ ಭಾಷೆಗಳಲ್ಲಿ ಬಂದಿರುವ ಚಾರಿತ್ರಿಕ ಬರೆವಣಿಗೆಗಳಲ್ಲಿ, ನಾವು ಇನ್ನೂ ರಾಜಕೀಯ ಹಾಗೂ ಚಾರಿತ್ರಿಕ ಪ್ರಜ್ಞೆಯುಳ್ಳ ವಿವಿಧ ಪಂಥಗಳ ಬೆಳವಣಿಗೆಯನ್ನು ಕಾಣುತ್ತಿಲ್ಲ. ದೇಶಭಾಷೆಗಳಲ್ಲಿ ಮರಾಠಿಯೊಂದೇ ಹದಿನೇಳನೆಯ ಶತಮಾನದ ಬಖೈರು ದಾಖಲೆಗಳನ್ನು ಮುಂದುವರಿಸಿ ತಕ್ಕಮಟ್ಟಿಗೆ ಬಲವಾದ ಒಂದು ಸಂಪ್ರದಾಯ ಹೊಂದಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಜನರಿಗೆ ತಾಯ್ನುಡಿಗಳ ಸಾಂಸ್ಕøತಿಕ ಮಹತ್ವದ ಅರಿವು ಬಂದಿದೆ. ಆಗಲೇ ಸಾಧಿತವಾಗಿದ್ದ ಪಕ್ವತೆಗೆ ದೆಹಲಿಯ ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳು ಪ್ರಜ್ಞಾಪೂರ್ಣ ರಾಷ್ಟ್ರೀಯನೀತಿಯಿಂದ ಬೆಂಬಲ ದೊರಕುತ್ತಿದೆ. ಅದು ಈ ಗತಿಯನ್ನು ಹೆಚ್ಚಿಸಿ ಮಾತೃಭಾಷೆಗಳಲ್ಲಿ ಚಾರಿತ್ರಿಕ ಬರೆವಣಿಗೆಗಳ ಬೌದ್ಧಿಕಾಂಶವನ್ನು ಹೆಚ್ಚು ಹೆಚ್ಚು ನಿಶ್ಚಿತಗೊಳಿಸುತ್ತಿದೆ. ಭಾರತದ ಕಿರಿಯ ಇತಿಹಾಸಕಾರರು ಪ್ರಾದೇಶಿಕ ಭಾಷೆಗಳಲ್ಲಿಯೇ ತಮ್ಮ ಕೃತಿಗಳನ್ನು ಬರೆದು ಪ್ರಕಟಿಸಲು ಹೆಚ್ಚು ಹೆಚ್ಚಾಗಿ ಬಯಸುತ್ತಿದ್ದಾರೆ. 					
(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ